Publish Date: Wed, 03 Apr 2024 (08:57 IST)
Updated Date: Wed, 03 Apr 2024 (08:59 IST)
ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರ ರಂಗೇರುತ್ತಿದ್ದು, ಇಂದು ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ಸುಮಲತಾ ತಮ್ಮ ಬೆಂಬಲಿಗರ ಜೊತೆ ಸಭೆ ನಡೆಸಲಿದ್ದಾರೆ.
ಇಂದು ಮಂಡ್ಯದಲ್ಲಿ ತಮ್ಮ ಬೆಂಬಲಿಗರು, ಸ್ಥಳೀಯ ನಾಯಕರೊಂದಿಗೆ ಸುಮಲತಾ ಸಭೆ ನಡೆಸಲಿದ್ದಾರೆ. ಅದಾದ ಬಳಿಕ ತಮ್ಮ ಮುಂದಿನ ನಡೆಯೇನು ಎಂದು ಎಲ್ಲರ ಅಭಿಪ್ರಾಯ ಪಡೆದು ಮುಂದುವರಿಯಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿಗೆ ಬೆಂಬಲ ನೀಡುತ್ತಾರೋ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೋ ಎಂದು ಇಂದು ಗೊತ್ತಾಗಲಿದೆ.
ಮೊನ್ನೆಯಷ್ಟೇ ಸುಮಲತಾ ಮನೆಗೆ ಭೇಟಿ ನೀಡಿದ್ದ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸುಮಲತಾ ಬೆಂಬಲಿಗರ ಜೊತೆ ಚರ್ಚಿಸಿ ತೀರ್ಮಾನ ಹೇಳುವುದಾಗಿ ತಿಳಿಸಿದ್ದರು. ಅದರಂತೆ ಇಂದು ಘೋಷಣೆ ಮಾಡಲಿದ್ದಾರೆ.
ಇಂದು ನಡೆಯುವ ಸಭೆಯಲ್ಲಿ ಸುಮಲತಾ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪುತ್ರ ಅಭಿಷೇಕ್ ಅಂಬರೀಶ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಆಪ್ತರೂ ಸಾಥ್ ನೀಡಲಿದ್ದಾರೆ. ಸುಮಲತಾ ಸ್ಪರ್ಧೆಗೆ ಅವರ ಬೆಂಬಲಿಗರಿಂದ ಒತ್ತಾಯವಿದೆ. ಆದರೆ ಅಂತಿಮ ನಿರ್ಧಾರ ಇಂದು ಹೊರಬೀಳಲಿದೆ.