ಉತ್ತರಾಖಂಡ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಬೆಂಕಿ ಹತ್ತಿಕೊಳ‍್ಳಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಅವರ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದಿದ್ದ ಇಂಡಿಯಾ ಒಕ್ಕೂಟದ ಸಮಾವೇಶದಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವೇಳೆ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಬೆಂಕಿ ಹತ್ತಿಕೊಳ್ಳಲಿದೆ ಎಂದಿದ್ದರು.
ರಾಹುಲ್ ಗಾಂಧಿ ಹೇಳಿಕೆಯನ್ನು ಇಂದು ಉತ್ತರಾಖಂಡದಲ್ಲಿ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಟೀಕಿಸಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ ಬಳಸುವಂತಹ ಭಾಷೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶವು ಮೂರನೇ ಬಾರಿಗೆ ಬಿಜೆಪಿಗೆ ಅಧಿಕಾರ ನೀಡಿದರೆ ದೇಶಕ್ಕೆ ಬೆಂಕಿ ಹಚ್ಚಲಾಗುವುದು ಎಂದು ಕಾಂಗ್ರೆಸ್ ನ ರಾಜಕುಮಾರ ಹೇಳಿಕೆ ನೀಡಿದ್ದಾರೆ. 70 ವರ್ಷಗಳ ಅವರು ಆಡಳಿತ ನಡೆಸಿ, ಈಗ 10 ವರ್ಷದಿಂದ ಆಡಳಿತ ಕಳೆದುಕೊಂಡಿದ್ದಾರೆ. ಅಷ್ಟಕ್ಕೇ ದೇಶಕ್ಕೆ ಬೆಂಕಿ ಹಚ್ಚುವ ಮಾತನಾಡುತ್ತಿದ್ದಾರೆ. ದೇಶಕ್ಕೆ ಬೆಂಕಿ ಹಚ್ಚಲು ನೀವು ಬಿಡುತ್ತೀರಾ? ಇದು ಒಪ್ಪತಕ್ಕ ಮಾತೇ? ಎಂದು ಮೋದಿ ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಕಾಂಗ್ರೆಸ್ ಮತ್ತು ಅದರ ಮನಸ್ಥಿತಿಯನ್ನು ಯಾರೂ ನಂಬುವುದಿಲ್ಲ. ಹೀಗಾಗಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ.