Publish Date: Tue, 02 Apr 2024 (14:12 IST)
Updated Date: Tue, 02 Apr 2024 (14:17 IST)
ನವದೆಹಲಿ: ಸುಳ್ಳು ಜಾಹೀರಾತು ಪ್ರಕರಣ ಸಂಬಂಧ ಯೋಗ ಗುರು ಬಾಬಾ ರಾಮದೇವ್ ಹಾಗೂ ಪತಂಜಲಿ ಆಯುರ್ವೇದ ಕಂಪನಿಯ ಎಂಡಿ ಆಚಾರ್ಯ ಬಾಲಕೃಷ್ಣ ಅವರು ಇಂದು ಸುಪ್ರೀಂಕೋರ್ಟ್ ಎದುರು ಹಾಜರಾದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸಲು ನೋಟಿಸ್ ನೀಡಿದ್ದರೂ ನಿರ್ಲಕ್ಷಿಸಿದ್ದ ಈ ಇಬ್ಬರೂ ಕೋರ್ಟ್ ಮುಂದೆ ಖುದ್ದು ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ತಾಕೀತು ಮಾಡಿತ್ತು. ಹೀಗಾಗಿ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠದ ಮುಂದೆ ಬಾಬಾ ರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರು ಹಾಜರಾಗಿದ್ದಾರೆ.
ರಾಮದೇವ್ ಹಾಗೂ ಬಾಲಕೃಷ್ಣ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇವರ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಾರದು ಎಂದು ಪೀಠ ಮಾರ್ಚ್ 19ರಂದು ಕೇಳಿತ್ತು. ನ್ಯಾಯಾಂಗ ನಿಂದನೆ ದಾಖಲಿಸುವ ಬಗ್ಗೆ ಬಾಬಾ ರಾಮದೇವ್ ಅವರಿಗೆ ಪೀಠ ಶೋಕಾಸ್ ನೋಟಿಸ್ ಅನ್ನೂ ಜಾರಿಗೊಳಿಸಿತ್ತು.
ಕೋರ್ಟ್‌ಗೆ ಅವರು ಹಾಜರಾದ ವೇಳೆ ಅವರು ಬೇಷರತ್ ಕ್ಷಮೆ ಕೇಳಿದರು ಎಂದು ವರದಿಯಾಗಿದೆ. ಏಪ್ರಿಲ್ 10ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ವಿವಿಧ ಕಾಯಿಲೆಗಳ ಚಿಕಿತ್ಸೆ ಸಂಬಂಧ ಪತಂಜಲಿಯು ತನ್ನ ಉತ್ಪನ್ನಗಳ ಕುರಿತು ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತು ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪ್ರಕರಣ ದಾಖಲಿಸಿದೆ.