Publish Date: Mon, 20 Nov 2023 (20:43 IST)
Updated Date: Mon, 20 Nov 2023 (19:47 IST)
ಉದ್ಯೋಗ ನೀಡುವುದಾಗಿ ನಂಬಿಸಿ ಭೂಮಿ ಪಡೆದು ವಂಚನೆ ಮಾಡಲಾಗಿರುವ ಗಂಭೀರ ಆರೋಪ ಕೇಳಿ ಬಂದಿದ್ದು ಖಾಸಗಿ ಕಂಪನಿ ಹೆಸರು ಬರೆದಿಟ್ಟು ಯುವ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಡಕನಹಳ್ಳಿಯಲ್ಲಿ ನಡೆದಿದೆ.
ಖಾಸಗಿ ಕಂಪನಿ ವಂಚನೆಗೆ ಮನನೊಂದ ಸಿದ್ದರಾಜು ಎಂಬ ಯುವ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಡಕನಹಳ್ಳಿ ಗ್ರಾಮದ ನಿವಾಸಿ ಸಿದ್ದರಾಜು ಅವರಿಗೆ ಪಾರ್ಲೆ ಆಗ್ರೋ ಇಂಡಸ್ಟ್ರೀಸ್ ಎಂಬ ಖಾಸಗಿ ಕಂಪನಿ ಉದ್ಯೋಗ ನೀಡುವುದಾಗಿ ಹೇಳಿ ಭೂಮಿ ಪಡೆದಿತ್ತು. ಅಲ್ಲದೆ ಸಿದ್ದರಾಜು ತಂದೆ ಸಿದ್ದೇಗೌಡ ಸೇರಿದಂತೆ ಅನೇಕ ರೈತರು ಅಡಕನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಜಮೀನು ನೀಡಿದ್ದಾರೆ.
ರೈತರ ಬಳಿ ಭೂಮಿ ಪಡೆಯುವಾಗ ಕಂಪನಿ ಕೆಲಸ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಉದ್ಯೋಗ ನೀಡದೆ ವಂಚಿಸಿದೆ. ಇದರಿಂದ ಮನನೊಂದ ಸಿದ್ದರಾಜು ಅವರು ಕಂಪನಿ ವಿರುದ್ಧ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳೆದ 45 ದಿನಗಳಿಂದ ಕಂಪನಿ ವಿರುದ್ಧ ರೈತರು ಧರಣಿ ನಡೆಸುತ್ತಿದ್ದಾರೆ. ಈವರೆಗೂ ಜನಪ್ರತಿನಿಧಿಗಳು, ಅಧಿಕಾರಿಗಳು ನೆರವಿಗೆ ಬಂದಿಲ್ಲ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.