ಬೆಂಗಳೂರು: ಸದನಕ್ಕೆ ಟಿ ಶರ್ಟ್ ಧರಿಸಿ ಬರಬೇಡಿ. ಫಾರ್ಮಲ್ ಡ್ರೆಸ್ ಧರಿಸಿ ಬರಬೇಕು ಎಂದು ಕರ್ನಾಟಕ ವಿಧಾನಸಭೆ ಸದಸ್ಯರಿಗೆ ಸ್ಪೀಕರ್ ಯು ಟಿ ಖಾದರ್ ಸಭ್ಯತೆ ಪಾಠ ಮಾಡಿದ್ದಾರೆ. ಆದರೆ ಇದರ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ರಾಹುಲ್ ಗಾಂಧಿಯೂ ಹೀಗೇ ಬರ್ತಾರೆ ಎಂದು ಕಾಲೆಳೆದಿದ್ದಾರೆ.
ಸದನದಲ್ಲಿ ನಿನ್ನೆ ಅಗಲಿದ ಹಿರಿಯ ಶಾಸಕ ಶಾಮನೂರು ಶಂಕರಪ್ಪಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿತ್ತು. ನಿನ್ನೆ ಸದನಕ್ಕೆ ಶಾಸಕ ಎಚ್ ಡಿ ರಂಗನಾಥ್ ಟಿ ಶರ್ಟ್ ಧರಿಸಿ ಬಂದಿದ್ದರು. ಇದನ್ನು ಗಮನಿಸಿ ಸ್ಪೀಕರ್ ಯು ಟಿ ಖಾದರ್ ಟಿ ಶರ್ಟ್ ಧರಿಸಿ ಬರಬೇಡಿ, ಇನ್ನು ಮುಂದೆ ಫಾರ್ಮುಲಾ ಧರಿಸಿ ಬನ್ನಿ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರಂಗನಾಥ್ ನೇರವಾಗಿ ಏರ್ ಪೋರ್ಟ್ ನಿಂದ ಬಂದಿದ್ದೆ. ಅದಕ್ಕೇ ಟಿ ಶರ್ಟ್ ಧರಿಸಿ ಬಂದಿದ್ದೆ ಎಂದು ಸಮಜಾಯಿಷಿ ನೀಡಿದ್ದಾರೆ. ಸ್ಪೀಕರ್ ಖಾದರ್ ಅವರ ಈ ಸಲಹೆ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಕೆಲವರು ರಾಹುಲ್ ಗಾಂಧಿ ಲೋಕಸಭೆ ಕಲಾಪಕ್ಕೆ ಬರುವಾಗ ಟಿ ಶರ್ಟ್ ಧರಿಸಿಯೇ ಬರುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಅದೂ ತೋಳು ಏರಿಸಿಕೊಂಡೇ ಸಂಸತ್ ಗೆ ಬರುತ್ತಾರೆ. ಅವರಿಗೂ ಹೀಗೇ ಹೇಳುತ್ತೀರಾ ಎಂದು ಕಾಲೆಳೆದಿದ್ದಾರೆ.