Publish Date: Wed, 17 May 2023 (15:19 IST)
Updated Date: Wed, 17 May 2023 (17:25 IST)
ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ದೂರವಾಣಿ ಮೂಲಕ ಮಾತನಾಡಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಿಮ್ಮ ಬೇಡಿಕೆ ಸರಿಯಾಗಿದೆ. ಸದ್ಯಕ್ಕೆ ಪಕ್ಷದ ಹಿತದೃಷ್ಟಿಯಿಂದ ಎರಡು ವರ್ಷ ಸಿದ್ದರಾಯಮ್ಮ ಅವರಿಗೆ ಅವಕಾಶ ಬಿಟ್ಟುಕೊಡಿ. ಎರಡು ವರ್ಷ ಆದ ಬಳಿಕ ನಾವೇ ಅಧಿಕಾರ ಹಸ್ತಾಂತರ ಮಾಡಿಸುತ್ತೇವೆ. ಈಗ ಡಿಸಿಎಂ ಆಗಿ, ಬೇಕಿದ್ದರೆ ನೀವೊಬ್ಬರೇ ಡಿಸಿಎಂ ಆಗಿ ಎಂದು ಸೋನಿಯಾ ಗಾಂಧಿ ಮಾತು ನೀಡಿದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ನೀವು ಯಾವ ಖಾತೆಯನ್ನು ಕೇಳುತ್ತೀರೋ ಅದನ್ನೇ ಕೊಡುತ್ತೇವೆ. ಒಂದು ವೇಳೆ ಸಿದ್ದರಾಮಯ್ಯ ಅವರೊಂದಿಗೆ ಸಂಪುಟದಲ್ಲಿ ಒಟ್ಟಾಗಿ ಕೆಲಸ ಮಾಡಲು ಇಷ್ಟವಿಲ್ಲ ಎಂದಾದರೆ, ನೀವು ಪಕ್ಷದ ಜವಾಬ್ದಾರಿಯಲ್ಲಿ ಮುಂದುವರಿಯಿರಿ. ಪಕ್ಷಕ್ಕಾಗಿ ನಿಮ್ಮ ಪ್ರಯತ್ನದ ಬಗ್ಗೆ ನಮಗೆ ಸಂಪೂರ್ಣ ಅರಿವು ಇದೆ. ಈಗಲೇ ಸಿಎಂ ಬೇಕು ಅಂತ ಹಠ ಹಿಡಿಯಬೇಡಿ. ಬೇರೆ ರಾಜ್ಯದಲ್ಲಾದಂತೆ ಕರ್ನಾಟಕದಲ್ಲಿ ಆಗಲು ನಾವು ಬಿಡುವುದಿಲ್ಲ ಎಂದು ಭರವಸೆ ನೀಡುವ ಮೂಲಕ ಡಿಕೆಶಿಗೆ ಸೋನಿಯಾ ಗಾಂಧಿ ಅಭಯಹಸ್ತ ನೀಡಿರುವುದಾಗಿ ತಿಳಿದುಬಂದಿದೆ.