Select Your Language

Notifications

webdunia
webdunia
webdunia
webdunia

ಹುಟ್ಟೂರಿನಲ್ಲಿ ಎಸ್‌.ಎಂ.ಕೃಷ್ಣ ಅಂತ್ಯಕ್ರಿಯೆ: ಅಂತಿಮ ವಿಧಿ ನೆರವೇರಿಸಿದ ಮೊಮ್ಮಗ ಅಮರ್ತ್ಯ

Former Chief Minister S. M. Krishna

Sampriya

ಮಂಡ್ಯ , ಬುಧವಾರ, 11 ಡಿಸೆಂಬರ್ 2024 (17:04 IST)
Photo Courtesy X
ಮಂಡ್ಯ: ಮಂಗಳವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಪಾರ್ಥಿವ ಶರೀರವನ್ನು ಮದ್ದೂರು ತಾಲೂಕಿನ ಸೋಮನಹಳ್ಳಿಯ ಹೊರವಲಯದ ಕೆಫೆ ಕಾಫಿ ಡೇ ಆವರಣಕ್ಕೆ ಕರೆತರಲಾಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು.

ಪೊಲೀಸರು ಕುಶಾಲತೋಪು ಸಿಡಿಸಿ, ಪೊಲೀಸ್‌ ಬ್ಯಾಂಡ್‌ ಮೂಲಕ ರಾಷ್ಟ್ರಗೀತೆ ನುಡಿಸಿ ಗೌರವ ನಮನ ಸಲ್ಲಿಸಿದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಸ್ಪೀಕರ್‌ ಯು.ಟಿ.ಖಾದರ್‌, ಕೇಂದ್ರ ಸಚಿವರಾದ ಹೆಚ್‌.ಡಿ.ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ಮಾಜಿ ಸಿಎಂ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿ ಅನೇಕ ಗಣ್ಯರು ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವನ್ನಿಟ್ಟು ಅಂತಿಮ ನಮನ ಸಲ್ಲಿಕೆ ಮಾಡಿದರು.  

ಸಚಿವರಾದ ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ, ಕೆ.ಹೆಚ್.ಮುನಿಯಪ್ಪ, ಹೆಚ್.ಕೆ.ಪಾಟೀಲ್, ಕೆ.ಸುಧಾಕರ್, ಕೆ.ವೆಂಕಟೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಆರ್.ಬಿ.ತಿಮ್ಮಾಪುರ, ಶಾಸಕರಾದ ನರೇಂದ್ರ ಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಗಣಿಗ ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ಕದಲೂರು ಉದಯ್, ಟಿ.ಬಿ.ಜಯಚಂದ್ರ, ವಿವೇಕಾನಂದ, ಸಂಸದ ಡಾ.ಸುಧಾಕರ್, ಮಾಜಿ ಸಂಸದ ಡಿ.ಕೆ.ಸುರೇಶ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ‌. ವಿಜಯೇಂದ್ರ, ಜೆಡಿಎಸ್ ಶಾಸಕಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಡಿಸಿಎಂ ಅಶ್ವಥ್ ನಾರಾಯಣ್, ಮಾಜಿ ಸಂಸದೆ ಸುಮಲತಾ, ಜೆಡಿಎಸ್‌ ನಾಯಕ ನಿಖಿಲ್‌ ಕುಮಾರಸ್ವಾಮಿ ಅಂತಿಮ ನಮನದಲ್ಲಿ ಪಾಲ್ಗೊಂಡಿದ್ದರು.

ಪೊಲೀಸ್‌ ಗೌರವದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಕೃಷ್ಣ ಅವರ ಪಾರ್ಥೀವ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಅವರ ಪತ್ನಿ ಪ್ರೇಮಾ ಅವರಿಗೆ ಹಸ್ತಾಂತರಿಸಿದರು.

ಕೃಷ್ಣ ಅವರ ಅಂತಿಮ ವಿಧಿವಿಧಾನ ಒಕ್ಕಲಿಗ ಸಂಪ್ರದಾಯದಲ್ಲಿ ನೆರವೇರಿಸಲಾಯಿತು. ಡಿ.ಕೆ.ಶಿವಕುಮಾರ್ ಅಳಿಯ, ಕೃಷ್ಣ ಅವರ ಮೊಮ್ಮಗ ಅಮರ್ತ್ಯ ಅವರು ಅಂತಿಮ ವಿಧಿವಿಧಾನ ನೆರವೇರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಲ್ಹಾದ್ ಜೋಶಿ ಮೂಲಕ ಎಸ್ಎಂ ಕೃಷ್ಣಗೆ ಮೋದಿ ಕಳುಹಿಸಿದ ವಿಶೇಷ ಗೌರವವೇನು ನೋಡಿ