ಬೆಂಗಳೂರು: ಕೃಷಿ ಸಚಿವರು ದೆಹಲಿಗೆ ಹೋಗಿದ್ದಾರೆ ಎಂದ ಮಾತ್ರಕ್ಕೆ ನಾಯಕತ್ವ ಬದಲಾವಣೆ ವಿಷಯಕ್ಕೆ ಅಂತಾನಾ? ಏನೋ ಬೇರೆ ಕೆಲಸಕ್ಕೆ ಹೋಗಿದ್ದಾರೆ ಬಿಡಯ್ಯಾ ಎಂದು ಸಿದ್ದರಾಮಯ್ಯ ಇಂದು ಮಾಧ್ಯಮಗಳ ಮೇಲೆಯೇ ಗರಂ ಆಗಿದ್ದಾರೆ.
ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಇದರ ನಡುವೆ ಡಿಕೆ ಶಿವಕುಮಾರ್ ಬೆಂಬಲಿಗ ಶಾಸಕರು ದೆಹಲಿಗೆ ತೆರಳಿದ್ದು ಹೈಕಮಾಂಡ್ ಭೇಟಿಗೆ ಯತ್ನಿಸುತ್ತಿದೆ ಎಂಬ ಸುದ್ದಿಗಳಿವೆ. ಇದಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿಯೇ ನೇತೃತ್ವ ವಹಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಇದರ ಬಗ್ಗೆ ಇಂದು ಮಾಧ್ಯಮಗಳಿಗೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ಕೃಷಿ ಸಚಿವರ ಜೊತೆ ನಾನು ನಿನ್ನೆ ಮಾತನಾಡಿದ್ದೆ. ಈವತ್ತೂ ವಿಡಿಯೋ ಕಾನ್ಫರೆನ್ಸ್ ಮಾಡಿದ್ದೆ. ಅವರೇನೋ ದೆಹಲಿಗೆ ಕೇಂದ್ರ ಕೃಷಿ ಸಚಿವರ ಭೇಟಿಗೆ ಹೋಗಿದ್ದೆ ಎಂದಿದ್ದಾರೆ. ಯಾವ ಶಾಸಕರು ಬೇಕಾದರೂ ದೆಹಲಿಗೆ ಹೋಗಲಿ ಹೈಕಮಾಂಡ್ ಭೇಟಿ ಮಾಡಲಿ. ಅದು ನಾಯಕತ್ವ ಬದಲಾವಣೆಗೇ ಅಂತೇನೂ ಅಲ್ಲ.
ಏನು ಬದಲಾವಣೆ ಮಾಡಬೇಕೆಂದಿದ್ದರೂ ಹೈಕಮಾಂಡ್ ತೀರ್ಮಾನಿಸಬೇಕು. ಹೈಕಮಾಂಡ್ ನವರು ಏನಾದ್ರೂ ನಾಯಕತ್ವ ಬದಲಾವಣೆ ಆಗುತ್ತೆ ಎಂದಿದ್ದಾರಾ? ಎಂದು ಮಾಧ್ಯಮಗಳಿಗೆ ಪ್ರಶ್ನೆ ಮಾಡಿದ್ದಾರೆ.
ಇನ್ನು, ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡುವ ಬಗ್ಗೆಯೂ ಸಿಎಂ ಮಾತನಾಡಿದ್ದಾರೆ. ಖರ್ಗೆಯವರೇ ಇಂದು ಬೆಂಗಳೂರಿಗೆ ಬರ್ತಿದ್ದಾರೆ. ನಾಳೆ ಅವರನ್ನು ಭೇಟಿ ಮಾಡಿ ಚರ್ಚೆ ಮಾಡ್ತೀನಿ ಎಂದಿದ್ದಾರೆ.