ಬೆಂಗಳೂರು: ಡಿಕೆ ಶಿವಕುಮಾರ್ ಪರ ದೆಹಲಿಗೆ ಹೋಗಿ ಲಾಬಿ ಮಾಡಿಕೊಂಡು ಬರಲು ಹೋದ ಬೆಂಬಲಿಗರನ್ನು ತಡೆಯಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಬಯಸುವ ಬೆಂಬಲಿಗ ನಾಯಕರಿಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ನೇತೃತ್ವ. ಆದರೆ ಸಿಎಂ ಸಿದ್ದರಾಮಯ್ಯ ಇಂತಹ ರಾಜಕಾರಣದಲ್ಲಿ ಪಳಗಿದ ಹುಲಿ. ಅವರಿಗೆ ಇದನ್ನೆಲ್ಲಾ ಹೇಗೆ ಎದುರಿಸಬೇಕು ಎಂದು ಚೆನ್ನಾಗಿಯೇ ಕರಗತವಾಗಿದೆ.
ಈ ಕಾರಣಕ್ಕೆ ದೆಹಲಿಗೆ ಹೋಗಿರುವ ಚೆಲುವರಾಯಸ್ವಾಮಿಯವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಮೊದಲೇ ಸಿದ್ದರಾಮಯ್ಯನವರು ಅವರನ್ನು ವಾಪಸ್ ಕರೆಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ ತುರ್ತಾಗಿ ಮೆಕ್ಕೆಜೋಳ ಖರೀದಿಸುವ ಸಂಬಂಧ ತುರ್ತು ಸಭೆ ಕರೆದಿದ್ದಾರೆ. ಇದಕ್ಕೆ ಕೃಷಿ ಸಚಿವರನ್ನು ಉಪಸ್ಥಿತರಿರಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಮೂಲಕ ಡಿಕೆಶಿ ಬೆಂಬಲಿಗರ ಒಗ್ಗಟ್ಟು ಮುರಿಯಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ಹೀಗಾಗಿ ಈಗ ಕೃಷಿ ಸಚಿವರು ಸಿಎಂ ಮಾತಿಗೆ ಓಗೊಟ್ಟು ದೆಹಲಿ ಬಿಟ್ಟು ಬೆಂಗಳೂರಿಗೆ ಬರುತ್ತಾರಾ ನೋಡಬೇಕಿದೆ. ಒಂದು ವೇಳೆ ಬರದೇ ಹೋದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣದ ನಡುವಿನ ತಿಕ್ಕಾಟ ಇನ್ನೊಂದು ಹಂತಕ್ಕೆ ಹೋಗುವ ಸಾಧ್ಯತೆಯಿದೆ. ಹೀಗಾಗಿ ಇಂದು ಈ ಬಣಗಳ ತಿಕ್ಕಾಟ ಎಲ್ಲಿಗೆ ತಲುಪುತ್ತದೆ ಎಂದು ಕಾದು ನೋಡಬೇಕಿದೆ.