ಮೈಸೂರು: ಮುಡಾ ಹಗರಣ ಸಂಕಷ್ಟ ಸಿಎಂ ಸಿದ್ದರಾಮಯ್ಯರನ್ನು ಕೊಂಚ ಅಲುಗಾಡಿಸಿದೆ ಎನ್ನುವುದು ಅವರ ಇತ್ತೀಚೆಗಿನ ವರ್ತನೆ ಸಾಬೀತುಪಡಿಸುತ್ತಿದೆ. ಕಳೆದ 25 ದಿನಗಳಲ್ಲಿ ಇದು ಎರಡನೇ ಬಾರಿಗೆ ಸಿಎಂ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ.
ಸಾಮಾನ್ಯವಾಗಿ ಸಿದ್ದರಾಮಯ್ಯ ದೇವಾಲಯಗಳಿಗೆ ಭೇಟಿ ಕೊಡುವುದು ಅಪರೂಪ. ಒಂದು ವೇಳೆ ಹೋದರೂ ಉಪವಾಸವಿದ್ದು ಹೋಗುವುದು, ಸಾತ್ವಿಕ ಆಹಾರ ಸೇವಿಸಿ ಹೋಗಬೇಕು, ಕುಂಕುಮ ಇಡಬೇಕು ಇತ್ಯಾದಿ ನಿಯಮಗಳನ್ನೆಲ್ಲಾ ಪಾಲಿಸುವವರೇ ಅಲ್ಲ. ದೇವಾಲಯಗಳಿಗೆ ಹೋದರೂ ಅಲ್ಲೇನೂ ವಿಶೇಷ ಸೇವೆ ಮಾಡುವುದಿಲ್ಲ.
ಆದರೆ ಈಗ ಮುಡಾ ಸಂಕಷ್ಟ ಎದುರಾದ ಮೇಲೆ ಸಂಕಟ ಬಂದರೆ ವೆಂಕಟರಮಣ ಎಂಬಂತಾಗಿದೆ ಸಿಎಂ ಸ್ಥಿತಿ. ಕಳೆದ 25 ದಿನಗಳ ಅವಧಿಯಲ್ಲಿ ಇದು ಎರಡನೇ ಬಾರಿಗೆ ಸಿಎಂ ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅದರಲ್ಲೂ ಇಂದಂತೂ ಅರ್ಚಕರು ಹಣೆಗೆ ಕುಂಕುಮ ಇಡುವಾಗಲೂ ಎಂದಿನಂತೆ ಬೇಡ ಎನ್ನದೇ ಮಾತನಾಡದೇ ಹಾಕಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ದೇವಿಗೆ ಪೂಜೆ ಬಳಿಕ ಹೊರಗೆ ಬಂದು ಈಡುಗಾಯಿಯನ್ನೂ ಒಡೆದಿದ್ದಾರೆ. ಸಿದ್ದರಾಮಯ್ಯ ಇಂತಹದ್ದೆನ್ನೆಲ್ಲಾ ಮಾಡುವುದನ್ನು ನೋಡುವುದೇ ಅಪರೂಪ. ಆದರೆ ಈಗ ಮುಡಾ ಸಂಕಷ್ಟ ಕುತ್ತಿಗೆವರೆಗೆ ಬಂದಿದ್ದು, ತಮ್ಮ ಸ್ಥಾನಕ್ಕೇ ಕುತ್ತು ಬಂದಿದೆ. ಹೀಗಾಗಿ ದೇವರ ಮೇಲಿನ ಭಕ್ತಿಯೂ ಹೆಚ್ಚಾಗಿದೆ ಎನ್ನಬಹುದು.