ಬೆಂಗಳೂರು: ವಿಪಕ್ಷಗಳು ಏನೇ ಆರೋಪ ಮಾಡಿದರೂ, ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟರೂ ಐದು ವರ್ಷವೂ ನನ್ನ ತಂದೆಯವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಸಿದ್ದರಾಮಯ್ಯ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸ್ವಾಭಿಮಾನ ಸಮಾವೇಶದ ಮೇಲ್ವಿಚಾರಣೆ ಮಾಡಲು ಬಂದಿದ್ದಾಗ ಮಾಧ್ಯಮಗಳ ಮುಂದೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಈಗಷ್ಟೇ ಉಪಚುನಾವಣೆ ಗೆದ್ದಿದ್ದೇವೆ. ನಮಗೆ ಜನ ಬೆಂಬಲವಿದೆ. ಜನ ಬೆಂಬಲವಿದೆ ಎಂದ ಮೇಲೆ ನಾವು ಐದು ವರ್ಷ ಕಂಪ್ಲೀಟ್ ಮಾಡಿಯೇ ಮಾಡುತ್ತೇವೆ ಎಂದಿದ್ದಾರೆ.
ಇನ್ನು ತಮ್ಮ ಕುಟುಂಬದ ವಿರುದ್ಧ ಹೊರಿಸಲಾಗಿರುವ ಮುಡಾ ಹಗರಣದ ಬಗ್ಗೆ ಮಾತನಾಡಿರುವ ಯತೀಂದ್ರ ನನ್ನ ತಂದೆ, ತಾಯಿ, ಸೋದರಮಾವನ ಮೇಲೆ ಭ್ರಷ್ಟಾಚಾರ ಆರೋಪ ಮಾಡಲಾಗಿದೆ. ಆದರೆ ಇದರಲ್ಲಿ ಯಾವುದೇ ಹುರುಳಿಲ್ಲ. ಇದು ವಿಪಕ್ಷಗಳಿಗೂ, ತನಿಖಾ ಸಂಸ್ಥೆಯವರಿಗೂ ಗೊತ್ತಿದೆ. ಆದರೂ ವಿನಾಕಾರಣ ಒಂದೊಂದು ನೆಪ ಮಾಡಿಕೊಂಡು ತನಿಖೆ ಮಾಡಲು ಬರುತ್ತಿದ್ದಾರಷ್ಟೇ ಎಂದಿದ್ದಾರೆ.
ಇನ್ನು ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ನಮಗೆ ನಂಬಿಕೆಯಿಲ್ಲ. ಹೀಗಾಗಿ ಮುಡಾದಲ್ಲಿ ನಡೆದಿದೆ ಎನ್ನಲಾದ 50:50 ಅನುಪಾತದಡಿಯಲ್ಲಿರುವ ಸೈಟುಗಳ ಅಕ್ರಮದ ಬಗ್ಗೆ ನಾವೇ ಒಂದು ತನಿಖಾ ತಂಡ ರಚಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಯತೀಂದ್ರ ಹೇಳಿದ್ದಾರೆ.