ಬೆಂಗಳೂರು: ಕರ್ನಾಟಕದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ಟೀಕಾ ಪ್ರಹಾರ ನಡೆಸಿದ್ದಾರೆ.
ದೇಶದ ಪ್ರಧಾನಿ ಆಗಿ ರಾಜ್ಯದ ಆರ್ಥಿಕತೆ ಏರುಗತಿಯಲ್ಲಿ ಸಾಗುತ್ತಿರುವುದಕ್ಕೆ ಬೆನ್ನುತಟ್ಟಬೇಕಿರುವ ನೀವು ರಾಜಕೀಯ ಪುಡಾರಿ ರೀತಿ ಟೀಕೆ ಮಾಡಿ ಕನ್ನಡಿಗರಿಗೆ ಅವಮಾನ ಮಾಡುವುದನ್ನು ಬಿಡಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ದಿನವೇ ಕನ್ನಡಿಗರಿಗೆ ಅಪಮಾನ ಮಾಡಿದ್ದೀರಿ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಪ್ರಧಾನ ಮಂತ್ರಿಯವರು ನಮ್ಮ ಸರ್ಕಾರದ ಕಡೆಗೆ ಬೆರಳು ತೋರುವ ಮುನ್ನ ಬಿಜೆಪಿ ಪಕ್ಷದ ವಿನಾಶಕಾರೀ ಇತಿಹಾಸದ ಬಗ್ಗೆ ಅವಲೋಕನ ಮಾಡಲಿ. ನಾವು ಜನರಿಗೆ ನೀಡಿದ್ದ ಪ್ರತಿ ಭರವಸೆಯನ್ನೂ ಪೂರೈಸಿದ್ದೇವೆ. ಆದರೆ ನಿಮ್ಮ ಭರವಸೆಗಳೇನಾಯಿತು? ಜನರ ಖಾತೆಗೆ 15 ಲಕ್ಷ ಹಾಕುತ್ತೀರಿ ಎಂದಿದ್ದಿರಿ. ಕಪ್ಪು ಹಣ ಮಾಯವಾಯಿತೇ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಿದೆಯೇ? ಎಲ್ಲಿದೆ ನಿಮ್ಮ ಸ್ಮಾರ್ಟ್ ಸಿಟಿ? ಮೇಕ್ ಇನ್ ಇಂಡಿಯಾ ಎಂದು ಸಿದ್ದು ಪ್ರಶ್ನೆ ಮಾಡಿದ್ದಾರೆ.
ಆಗಾಯ ಸುಳ್ಳು ಆರೋಪಗಳನ್ನು ಪೋಣಿಸಿಕೊಂಡು ಕರ್ನಾಟಕದ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಬಂದಿದ್ದೀರಿ. ಈ ತೂ ತೂ ಮೈ ಮೈ ಚರ್ಚೆಗೆ ತಾರ್ಕಿಕ ಅಂತ್ಯ ಹಾಡೋಣ. ಕಳೆದ ಎರಡು ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಪಕ್ಷ ಹೊರಡಿಸಿದ್ದ ಪ್ರಣಾಳಿಕೆಯನ್ನು ಇಟ್ಟುಕೊಂಡು ಚರ್ಚೆ ಮಾಡೋಣ. ಎಷ್ಟು ಭರವಸೆಗಳನ್ನು ಈಡೇರಿಸಿದ್ದೀರಿ ನೋಡೋಣ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.