Publish Date: Sun, 29 Jun 2025 (14:01 IST)
Updated Date: Sun, 29 Jun 2025 (14:04 IST)
ಬೆಂಗಳೂರು: ಸೆಪ್ಟೆಂಬರ್ ನಂತರ ಕ್ರಾಂತಿ ಆಗಲಿದೆ ಎಂಬ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮುಖ್ಯಮಂತ್ರಿ ಬದಲಾವಣೆಯ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ತಿನ ಸದಸ್ಯ ಡಾ. ಯತೀಂದ್ರ, ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಮತ್ತು ಶಾಸಕರ ಬೆಂಬಲವಿದೆ. ಯಾವುದೇ ಬದಲಾವಣೆಯ ಸೂಚನೆ ಹೈಕಮಾಂಡ್‌ನಿಂದ ಬಂದಿಲ್ಲ ಎಂದು ಹೇಳಿದರು.
ಕೆಲವು ಗುಂಪುಗಳು ಮುಖ್ಯಮಂತ್ರಿ ಬದಲಾಗಬೇಕೆಂಬ ಆಕಾಂಕ್ಷೆಯನ್ನು ಹೊಂದಿವೆ. ಹೀಗಾಗಿ, ಕೆಲವರು ಊಹಾಪೋಹಗಳನ್ನು ಹರಡುತ್ತಲೇ ಇದ್ದಾರೆ. ಆ ಗುಂಪು ಯಾವುದು ಎನ್ನುವುದು ನನಗೆ ಗೊತ್ತಿಲ್ಲ ಎಂದರು.
ರಾಜ್ಯ ಸರ್ಕಾರ ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ನಡೆಯುತ್ತಿದೆ. ಬದಲಾವಣೆ ಮಾಡುವ ಬಗ್ಗೆ ಹೈಕಮಾಂಡ್ ಯಾವುದೇ ಸೂಚನೆಯನ್ನು ಕೊಟ್ಟಿಲ್ಲ. ಹೀಗಾಗಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.