Publish Date: Thu, 14 Nov 2024 (09:45 IST)
Updated Date: Thu, 14 Nov 2024 (09:49 IST)
ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಸದಾ ಟೀಕೆ ಮಾಡುವ ಬಿಜೆಪಿಯವರು ಗ್ಯಾರಂಟಿ ಯೋಜನೆಯ ಫಲಾನುಭವಿಗಳಲ್ವಾ? ಫ್ರೀ ಬಸ್ಸಲ್ಲಿ ಓಡಾಡಲ್ವಾ? ಹೀಗೆಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಟಿ ನರಸೀಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ಬಿಜೆಪಿ ಮೇಲೆ ಟೀಕಾ ಪ್ರಹಾರ ನಡೆಸಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಕರ್ನಾಟಕದ ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ಮಾಡಿರುವುದನ್ನು ಉಲ್ಲೇಖಿಸಿ ಅವರು ತಿರುಗೇಟು ಕೊಟ್ಟಿದ್ದಾರೆ.
ಈ ಬಿಜೆಪಿಯವರಿಗೆ, ಗ್ಯಾರಂಟಿ ವಿರೋಧಿಗಳಿಗೆ ನಾನು ನೇರವಾಗಿ ಒಂದು ಪ್ರಶ್ನೆ ಕೇಳುತ್ತಿದ್ದೇನೆ. ರಾಜ್ಯದಲ್ಲಿರುವ ಬಿಜೆಪಿಯವರು ಗ್ಯಾರಂಟಿ ಯೋಜನೆಯ ಫಲಾನುಭವಿಗಳಲ್ಲವೇ? ಬಿಜೆಪಿಯವರು ಉಚಿತವಾಗಿ ಬಸ್ಸಲ್ಲಿ ಓಡಾಡುತ್ತಿಲ್ಲವೇ? ಉಚಿತವಾಗಿ ವಿದ್ಯುತ್ ಪಡೆಯುತ್ತಿಲ್ಲವೇ? ಬಿಜೆಪಿಯವರು ಗೃಹಲಕ್ಷ್ಮಿ ಹಣ ತೆಗೆದುಕೊಳ್ಳುತ್ತಿಲ್ಲವೇ? ಇಲ್ಲ ನಾವು ತೆಗೆದುಕೊಳ್ಳುತ್ತಿಲ್ಲ ಎಂದು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ.
ರಾಜ್ಯ ಬಿಜೆಪಿ ಕರ್ನಾಟಕದ ಗ್ಯಾರಂಟಿ ಫಲಾನುಭವಿಗಳನ್ನು ಅವಮಾನಿಸಿ, ಅಪಪ್ರಚಾರ ಮಾಡುವುದನ್ನು ನಿಲ್ಲಿಸದಿದ್ದರೆ ಕೋಟಿ ಕೋಟಿ ಫಲಾನುಭವಿಗಳು ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಾಕ್ಪ್ರಹಾರ ನಡೆಸಿದ್ದಾರೆ.