Select Your Language

Notifications

webdunia
webdunia
webdunia
webdunia

ಆಸ್ಪತ್ರೆಗೆ ಹೋದ ಗರ್ಭಿಣಿಯರು ಬದುಕಿ ಬರುತ್ತಾರೆಂಬುದಕ್ಕೆ ಗ್ಯಾರಂಟಿ ಇಲ್ಲವಾಗಿದೆ: ಶೋಭಾ ಕರಂದ್ಲಾಜೆ

Shobha Karandlaje

Krishnaveni K

ಬೆಂಗಳೂರು , ಶನಿವಾರ, 30 ನವೆಂಬರ್ 2024 (17:12 IST)
ಬೆಂಗಳೂರು: ಕರ್ನಾಟಕದಲ್ಲಿ ಆರೋಗ್ಯ ಇಲಾಖೆಗೆ ಅನಾರೋಗ್ಯ ಬಡಿದಿದೆ ಎಂದು ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ಅವರು ಆಕ್ಷೇಪಿಸಿದರು.

ದೆಹಲಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಆರೋಗ್ಯ ಇಲಾಖೆಯು ಭ್ರಷ್ಟಾಚಾರ, ಸ್ವಜನಪಕ್ಷಪಾತ, ನಿರ್ಲಕ್ಷ್ಯ, ದುರಹಂಕಾರದಿಂದ ತುಂಬಿತುಳುಕಿ ಇವತ್ತು ನಮ್ಮ ರಾಜ್ಯದ ಮಹಿಳೆಯರ ಮತ್ತು ಮಕ್ಕಳ ಸಾವಿಗೆ ಕಾರಣವಾಗುತ್ತಿದೆ ಎಂದು ಅವರು ಟೀಕಿಸಿದರು.

ಲೋಕಾಯುಕ್ತದವರು ಆಸ್ಪತ್ರೆಗಳಿಗೆ ಭೇಟಿ ನೀಡಿ ಛೀಮಾರಿ ಹಾಕಿದ್ದಾರೆ. ಹಲವಾರು ತಜ್ಞರ ತಂಡಗಳು ಆಸ್ಪತ್ರೆಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ವರದಿ ಕೊಟ್ಟಿವೆ. ಆಸ್ಪತ್ರೆಗೆ ಹೋಗುವ ಸಾರ್ವಜನಿಕರು ಬದುಕಿ ವಾಪಸ್ ಬರುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಸ್ಪತ್ರೆಗಳಲ್ಲಿ ಆಗುವ ಸಾವು ಕರ್ನಾಟಕವನ್ನು ಆತಂಕಕ್ಕೆ ಈಡು ಮಾಡಿದೆ. ಕರ್ನಾಟಕದಲ್ಲಿ ಹೆರಿಗೆ ಆಸ್ಪತ್ರೆಗಳಲ್ಲಿ ಆಗುವ ಸಾವನ್ನು ಸರಕಾರ ಮುಚ್ಚಿಡುತ್ತಿದೆ. ಒಂದೆಡೆ ಬಾಣಂತಿಯರ ಸಾವು, ಮತ್ತೊಂದೆಡೆ ಮಕ್ಕಳ ಸಾವು ಸಂಭವಿಸುತ್ತಿದೆ ಎಂದು ವಿವರಿಸಿದರು.
 
ಬಳ್ಳಾರಿ ನಮ್ಮ ಕಣ್ಣಿಗೆ ಕಾಣುವ ಉದಾಹರಣೆಯಷ್ಟೇ. ಬಳ್ಳಾರಿಯಲ್ಲಿ ಒಟ್ಟು 5 ಸಾವಾಗಿದೆ. ಸಿಸೇರಿಯನ್ ಆದಂಥ ಹೆಣ್ಮಕ್ಕಳು ಅವರಿಗೆ ಕೊಟ್ಟ ಗ್ಲುಕೋಸ್ ಕಾರಣಕ್ಕಾಗಿ ಮೃತಪಟ್ಟಿದ್ದಾರೆ. ರಾಜೀವ್ ಗಾಂಧಿ ವಿವಿ ಮತ್ತು ಇತರ ವೈದ್ಯರ ತಂಡಗಳು ಇದೇ ಕಾರಣಕ್ಕಾಗಿ ಸಾವು ಸಂಭವಿಸಿದೆ ಎಂದು ವರದಿ ನೀಡಿವೆ ಎಂದು ತಿಳಿಸಿದರು.
 
ಮುಖ್ಯಮಂತ್ರಿ, ಸಚಿವರ ದುಡ್ಡಿನ ಆಸೆಗೆ ಬಡವರು ಬಲಿ
ಈ ಗ್ಲುಕೋಸ್ ಸರಬರಾಜು ಬೇಡ ಎಂದರೂ ಅದನ್ನೇ ಪೂರೈಸಲಾಗುತ್ತಿದೆ. ಒಂದೆಡೆ ಶರಣಪ್ರಕಾಶ್ ಪಾಟೀಲ್ ಅವರು ನಮ್ಮ ಆಸ್ಪತ್ರೆ ಮುಂದೆ ಇರುವ ಕೇಂದ್ರ ಸರಕಾರದ ಜನೌಷಧಿ ಕೇಂದ್ರವನ್ನೂ ಮುಚ್ಚುತ್ತೇನೆ ಎನ್ನುತ್ತಾರೆ. ಅಂದರೆ ಇವರೇನು ಮಾಡಲು ಹೊರಟಿದ್ದಾರೆ? ಮತ್ಯಾವುದೋ ದಂಧೆ ಮಾಡಲು ಹೊರಟಿದ್ದೀರಿ. ಇನ್ಯಾವುದೋ ಶೆಲ್ ಕಂಪೆನಿಗೆ ಟೆಂಡರ್ ಕೊಡಲು ಹೊರಟಿದ್ದೀರಿ ಎಂದು ಶೋಭಾ ಕರಂದ್ಲಾಜೆ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ ಜನೌಷಧಿ, ಸೌಲಭ್ಯಗಳನ್ನು ತೆಗೆದುಕೊಳ್ಳಲು ನೀವು ಸಿದ್ಧರಿಲ್ಲ; ನೀವೇ ಸ್ವಂತ ಟೆಂಡರ್ ಕರೆದು, ಭ್ರಷ್ಟಾಚಾರ ಮಾಡಿ ಪರ್ಸೆಂಟೇಜ್ ಹೊಡೆಯಲು ಮುಂದಾಗಿದ್ದೀರಿ. ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳ, ಮಂತ್ರಿಗಳ ದುಡ್ಡಿನ ಆಸೆಗೆ ನಮ್ಮ ಬಡವರು ಇವತ್ತು ಬಲಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
 
ಸಚಿವ ದಿನೇಶ್ ಗುಂಡೂರಾವ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸಿದ್ದರಾಮಯ್ಯರನ್ನು ಆಗ್ರಹಿಸಿದರು. ಬಡವರು, ಹಿಂದುಳಿದವರು, ದಲಿತರ ಪರ ಎಂದು ಮುಖ್ಯಮಂತ್ರಿಗಳು ಭಾಷಣ ಮಾಡಿದರೆ ಸಾಲದು; ಕಳಕಳಿ ಇರಬೇಕಲ್ಲವೇ? ಆ ಹೆಣ್ಮಕ್ಕಳ ಕುಟುಂಬಕ್ಕೆ, ಸತ್ತಿರುವ ಹೆಣ್ಮಕ್ಕಳ ಶಿಶುವಿಗೆ ಯಾರು ಗತಿ ಎಂದು ಪ್ರಶ್ನಿಸಿದರು. ದುರ್ಘಟನೆಗಳ ಕುರಿತು ತನಿಖೆ ನಡೆಸಬೇಕು ಮತ್ತು ಸತ್ತ ಬಾಣಂತಿಯರ, ಮಕ್ಕಳ ಕುಟುಂಬಕ್ಕೆ ಪರಿಹಾರ ಕೊಡಿ ಎಂದು ಒತ್ತಾಯಿಸಿದರು.
 
ನಿಗದಿತ ಕಂಪೆನಿಯ 2ನೇ ಬ್ಯಾಚಿನ ಗ್ಲುಕೋಸ್ ಬ್ಯಾನ್ ಮಾಡಲು ಕೇಂದ್ರ ಸರಕಾರ ತಿಳಿಸಿದ್ದರೂ, ರಾಜ್ಯ ಸರಕಾರದ ಸುತ್ತೋಲೆ ಹೋದರೂ ಆಸ್ಪತ್ರೆಗಳಿಗೆ ಇದು ಹೇಗೆ ಬಂತು? ಅವನ್ನೇ ನಮ್ಮ ಬಾಣಂತಿ ಹೆಣ್ಮಕ್ಕಳಿಗೆ ಹೇಗೆ ಕೊಟ್ಟರು? ಇದರ ಹಿಂದಿರುವ ಕೈವಾಡ ಯಾವುದು? ಈ ಕಂಪೆನಿಯ ನಿರ್ದೇಶಕರು, ಹಿನ್ನೆಲೆ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು. ಶೆಲ್ ಕಂಪೆನಿ ಮೂಲಕ ನಕಲಿ ಔಷಧಿ ಮಾರಾಟ ಮಾಡುತ್ತಿದ್ದಾರೆ. ಇದು ಬಹಳ ಆಶ್ಚರ್ಯ ಮತ್ತು ದುಃಖ ತರುತ್ತಿದೆ ಎಂದು ನುಡಿದರು.
 
ಕರುಣೆ ಇಲ್ಲದ, ನಿರ್ದಯಿ ಸರಕಾರ
ಸಿದ್ದರಾಮಯ್ಯರ ಸರಕಾರ ನಿರ್ದಯಿ ಸರಕಾರವಾಗಿದೆ. ಕರುಣೆ ಇಲ್ಲದ, ಕೊಲೆಗಡುಕರ ಸರಕಾರವಾಗಿದೆ ಎಂದು ಕು.ಶೋಭಾ ಕರಂದ್ಲಾಜೆ ಅವರು ಟೀಕಿಸಿದರು. 

ನಾನೇ ಕೆ.ಆರ್.ಪುರ ಆಸ್ಪತ್ರೆಗೆ ಭೇಟಿ ನೀಡಿದ್ದೆ; ಸರಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲ ಎಂದು ತಿಳಿಸಿದರು. ಔಷಧಿ ಸರಿಯಾಗಿ ಇಲ್ಲ; ಶಸ್ತ್ರಚಿಕಿತ್ಸೆಗೆ ಉಪಕರಣ ಸರಿಯಾಗಿ ಬರುವುದಿಲ್ಲ; ವೈದ್ಯರಿಲ್ಲ; ಕಂಪ್ಯೂಟರ್ ಸಿಬ್ಬಂದಿಗಳೂ ಇಲ್ಲ. ಇದೆಲ್ಲಕ್ಕೂ ದಿನೇಶ್ ಗುಂಡೂರಾವ್ ಅವರು ನೇರ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು.
 
ಕೇವಲ ಮಧ್ಯ ಕರ್ನಾಟಕದಲ್ಲಿ ಜನವರಿಯಿಂದ 111 ನವಜಾತ ಶಿಶುಗಳು ಸಾವನ್ನಪ್ಪಿದ ಮಾಹಿತಿ ಸಿಕ್ಕಿದೆ. ಸಿಸೇರಿಯನ್ ಆದ 27 ತಾಯಂದಿರು ಇದೇ ಭಾಗದಲ್ಲಿ ಮೃತಪಟ್ಟಿದ್ದಾರೆ. ಸರಕಾರ ಏನು ಮಾಡುತ್ತಿದೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ ಎಂದು ಆತಂಕ ವ್ಯಕ್ತಪಡಿಸಿದರು.
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಮೂರು ಬಾರಿ ಹಾರ್ಟ್ ಆಪರೇಷನ್ ಮಾಡ್ಸಿದ್ದೀನಿ ಎಂದ ಕುಮಾರಸ್ವಾಮಿ: ರೆಸ್ಟ್ ಮಾಡಣ್ಣ ಎಂದ ನೆಟ್ಟಿಗರು