Publish Date: Sat, 22 Jun 2024 (10:12 IST)
Updated Date: Sat, 22 Jun 2024 (10:25 IST)
ಬೆಂಗಳೂರು: ಎಚ್ ಡಿ ರೇವಣ್ಣ ಕುಟುಂಬಕ್ಕೆ ಯಾಕೋ ಶಾಪ ತಟ್ಟಿದಂತಿದೆ. ಪ್ರಜ್ವಲ್ ರೇವಣ್ಣಬಳಿಕ ಈಗ ಸಹೋದರ ಸೂರಜ್ ರೇವಣ್ಣ ಮೇಲೂ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಆದರೆ ಇದು ಹಣಕ್ಕಾಗಿ ಮಾಡಲಾಗಿದೆ ಎಂದು ಸೂರಜ್ ರೇವಣ್ಣ ಪ್ರತ್ಯಾರೋಪ ಮಾಡಿದ್ದಾರೆ.
ಇತ್ತೀಚೆಗಷ್ಟೇ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೊಳಗಾಗಿದ್ದ ಪ್ರಜ್ವಲ್ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದೀಗ ಅವರ ಸಹೋದರ ಸೂರಜ್ ರೇವಣ್ಣ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಅದೂ ಯುವಕನೊಬ್ಬನಿಗೆ ಲೈಂಗಿಕ ಶೋಷಣೆ ಮಾಡಿದ ಆರೋಪ ಕೇಳಿಬಂದಿದೆ. ಆದರೆ ಇದನ್ನು ಸೂರಜ್ ರೇವಣ್ಣ ಅಲ್ಲಗಳೆದಿದ್ದು ಯುವಕನ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾರೆ.
ಕೆಲಸ ಕೊಡಿಸದಿದ್ದಕ್ಕೆ ಅಪಪ್ರಚಾರ ಮಾಡುವ ಬೆದರಿಕೆ ಹಾಕಿರುವ ಆರೋಪಿ ತನ್ನಿಂದ 5 ಕೋಟಿ ರೂ. ಕಿತ್ತುಕೊಳ್ಳಲು ಈ ರೀತಿ ಆರೋಪ ಮಾಡುತ್ತಿದ್ದಾನೆ ಎಂದು ಸೂರಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಹೊಳೆನರಸೀಪುರದಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಮಾಧ್ಯಮವೊಂದರಲ್ಲಿ ಎಚ್ ಡಿ ರೇವಣ್ಣ ಕಿರಿಯ ಪುತ್ರ ಸೂರಜ್ ತನ್ನ ಮೇಲೆ ಲೈಂಗಿ ಕ ದೌರ್ಜನ್ಯವೆಸಗಿದ್ದಾರೆ. ಈ ಬಗ್ಗೆ ಡಿಜಿಪಿ, ಸಿಎಂ, ಡಿಸಿಎಂಗೆ ದೂರು ನೀಡಿರುವುದಾಗಿ ಹೇಳಿದ್ದಾನೆ. ಆದರೆ ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಡಿಜಿಪಿ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಇದು ಹಣಕ್ಕಾಗಿ ಮಾಡಿರುವ ಬ್ಲ್ಯಾಕ್ ಮೇಲ್ ತಂತ್ರವಾಗಿರಬಹುದೇ ಎಂಬ ಅನುಮಾನ ಮೂಡಿದೆ.