ಬೆಳಗಾವಿ: 2ಎ ಮೀಸಲಾತಿಗಾಗಿ ನಡೆದ ಹೋರಾಟದಲ್ಲಿ ಪೊಲೀಸರ ಲಾಠಿ ಪ್ರಹಾರದಿಂದ ಗಾಯಗೊಂಡವರ ಮನೆಗೆ ತೆರಳಿ ಆತ್ಮಸ್ಥೈರ್ಯ ತುಂಬುವ ಅಭಿಯಾನವನ್ನು ಡಿ.23ರಂದು ಬೆಳಗಾವಿಯಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯಂಜಯ ಸ್ವಾಮೀಜಿ ತಿಳಿಸಿದರು.
ಲಾಠಿ ಚಾರ್ಜ್ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು, 12 ಮಂದಿದ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಹಿಂಪಡೆಯಬೇಕು, ಲಾಠಿ ಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿ ಅಮಾನತುಗೊಳಿಸಬೇಕು ಎಂಬ ಆಗ್ರಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಣಿದಿಲ್ಲ ಎಂದು ದೂರಿದರು.
ಬೆಳಗಾವಿಯಿಂದ ಅಭಿಯಾನ ಆರಂಭಿಸಿ ವಿವಿಧ ಜಿಲ್ಲೆ, ತಾಲ್ಲೂಕುಗಳಲ್ಲಿ ಗಾಯಾಳುಗಳ ಮನೆಗೆ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಲಾಗುವುದು. ಸಮುದಾಯದವರಿಂದ ಧನ ಸಂಗ್ರಹಿಸಿ ಗಾಯಾಳುಗಳಿಗೆ ಆರ್ಥಿಕ ಸಹಾಯ ನೀಡಲಾಗುವುದು ಎಂದು ತಿಳಿಸಿದರು.
ಬೆಳಗಾವಿಯಲ್ಲಿ ವಿಕಾಸಸೌಧಕ್ಕೆ ಮುಂದಾದ ಹೋರಾಟಗಾರರಿಗೆ ಪೊಲೀಸರು ಮಾರಣಾಂತಿಕವಾಗಿ ಹೊಡೆದಿದ್ಧಾರೆ. ಕೆಲವರಿಗೆ ತಲೆಗೆ ಪೆಟ್ಟಾಗಿದೆ, ಕೈ ಮುರಿದಿದೆ. ಸಂಕ್ರಾಂತಿ ನಂತರ ಪ್ರತಿ ಹಳ್ಳಿಗೆ ಹೋಗಿ ಸಮುದಾಯದವರೊಂದಿಗೆ ಸಂವಾದ ನಡೆಸುತ್ತೇನೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಸರ್ಕಾರ ತೋರಿದ ಅಲಕ್ಷ್ಯವನ್ನು ತಿಳಿಸುತ್ತೇನೆ ಎಂದರು.