ಬೆಂಗಳೂರು: ಚನ್ನಪಟ್ಟಣ ಬೈ ಎಲೆಕ್ಷನ್ ಗೆಲ್ಲಲು ಶತಾಯ ಗತಾಯ ಪ್ರಯತ್ನ ಮಾಡುತ್ತಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ತಮ್ಮ ತೋಟದ ಮನೆಯಲ್ಲಿ ಭರ್ಜರಿ ಪ್ಲ್ಯಾನಿಂಗ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಚನ್ನಪಟ್ಟಣ ಉಪ ಚುನಾವಣೆ ಕುಮಾರಸ್ವಾಮಿಯವರಿಗೆ ಪ್ರತಿಷ್ಠೆಯ ಕಣ. ಬಿಜೆಪಿಯಲ್ಲಿದ್ದಾಗ ಸಿಪಿ ಯೋಗೇಶ್ವರ್ ಟಿಕೆಟ್ ಕೇಳಿದರೂ ಕೊಡದೇ ತಮ್ಮ ಪುತ್ರ ನಿಖಿಲ್ ರನ್ನೇ ಇಲ್ಲಿಂದ ಕಣಕ್ಕಿಳಿಸಿದ್ದಾರೆ. ಈ ಜಿದ್ದು ಬಿಜೆಪಿಯ ಕೆಲವು ನಾಯಕರಿಗೆ ಒಳಗೊಳಗೇ ಇದೆ. ಆದರೆ ಮೈತ್ರಿಯಾಗಿರುವ ಕಾರಣಕ್ಕೆ ಹೇಳಿಕೊಳ್ಳುವಂತಿಲ್ಲ.
ನಿಖಿಲ್ ಈಗಾಗಲೇ ಹಿಂದೊಮ್ಮೆ ಚುನಾವಣೆ ಎದುರಿಸಿ ಸೋತಿದ್ದಾರೆ. ಹೀಗಾಗಿ ಮತ್ತೆ ಸೋತರೆ ಅದು ಕುಮಾರಸ್ವಾಮಿಗೇ ಅಭಿಮಾನ ಭಂಗವಾದಂತೆ. ಹೀಗಾಗಿ ಎಚ್ ಡಿ ಕುಮಾರಸ್ವಾಮಿ ಈಗ ಚನ್ನಪಟ್ಟಣದಲ್ಲಿ ಯಾವ ಲೆಕ್ಕಾಚಾರಗಳೊಂದಿಗೆ ಪ್ರಚಾರ ನಡೆಸಬೇಕು ಎಂದು ತಮ್ಮ ಬಿಡದಿಯ ತೋಟದ ಮನೆಯಲ್ಲಿ ರಹಸ್ಯ ಮೀಟಿಂಗ್ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಯಾವ ಸಮುದಾಯದ ಮತ ಸೆಳೆಯುವತ್ತ ಗಮನ ಹರಿಸಬೇಕು, ಪ್ರಚಾರ ಯಾವ ರೀತಿ ಇರಬೇಕು ಎಂದು ಕುಮಾರಸ್ವಾಮಿ ತಮ್ಮ ತೋಟದ ಮನೆಯಲ್ಲಿ ಮೀಟಿಂಗ್ ನಡೆಸಿ ಯೋಜನೆ ರೂಪಿಸಿದ್ದಾರೆ. ಇಂದಿನಿಂದ ಅವರು ಚುನಾವಣಾ ಪ್ರಚಾರ ಕಣಕ್ಕಿಳಿಯಲಿದ್ದು, ಅದಕ್ಕೆ ಮುನ್ನ ಸರಿಯಾಗಿ ಯೋಜನೆ ರೂಪಿಸಿಕೊಂಡೇ ಕಣಕ್ಕಿಳಿಯುತ್ತಿದ್ದಾರೆ ಎಂದು ತಿಳಿದುಬಂದಿದೆ.