Select Your Language

Notifications

webdunia
webdunia
webdunia
webdunia

ಮಾಜಿ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಹಲವು ಹಗರಣಗಳ ಆರೋಪ: ದೂರು ನೀಡಲು ಮುಂದಾದ ಕಾಂಗ್ರೆಸ್

Araga Jnanendra

Krishnaveni K

ಬೆಂಗಳೂರು , ಶುಕ್ರವಾರ, 20 ಸೆಪ್ಟಂಬರ್ 2024 (16:47 IST)
Photo Credit: Facebook
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪ ಮಾಡಿರುವ ಬಿಜೆಪಿ ನಾಯಕರ ವಿರುದ್ಧ ಈಗ ಕಾಂಗ್ರೆಸ್ ಒಂದೊಂದೇ ಆರೋಪ ಹೊರಿಸುತ್ತಿದ್ದು, ಒಬ್ಬರಾದ ಮೇಲೊಬ್ಬರಂತೆ ದೂರು ನೀಡುತ್ತಿದೆ.

ಇದೀಗ ಮಾಜಿ ಗೃಹಸಚಿವ ಅರಗ ಜ್ಞಾನೇಂದ್ರ ವಿರುದ್ಧ ಹಗರಣಗಳ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಇಂದು ಅವರ ವಿರುದ್ಧ ದೂರು ನೀಡಲು ಸಜ್ಜಾಗಿದೆ. ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.

ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದ ವೇಳೆ ಅನೇಕ ಅಕ್ರಮಗಳು ತೀರ್ಥಹಳ್ಳಿ ಕ್ಷೇತ್ರದಲ್ಲಿ ನಡೆದಿದೆ. ಪಿಎಸ್ ಐ ಹಗರಣದಿಂದ ಹಿಡಿದು ಕಳಪೆ ಕಟ್ಟಡ ಕಾಮಗಾರಿಗಳು ನಡೆದಿವೆ. ಈ ವಿಚಾರಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ, ಗೃಹಸಚಿವರು ಹಾಗೂ ಪ್ರಿಯಾಂಕ ಖರ್ಗೆ ಅವರ ಗಮನಕ್ಕೆ ತರಲಾಗುವುದು ಹಾಗೂ ಅರಗ ಜ್ಞಾನೇಂದ್ರ ಅವರ ವಿರುದ್ಧ ವಿಶೇಷ ತನಿಖಾ ತಂಡ ರಚನೆ ಮಾಡಬೇಕು ಎಂದು ಶನಿವಾರ (ಸೆ.21) ಅಥವಾ ಇಂದು ಸಂಜೆ ಮನವಿ ಸಲ್ಲಿಸಲಾಗುವುದು ಎಂದು ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ಅರಗ ಜ್ಞಾನೇಂದ್ರ ಅವರ ಕಾಲದಲ್ಲಿ ನಡೆದ ಪಿಎಸ್ ಐ ಹಗರಣದ ತನಿಖೆ ವೇಳೆ ಇವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಅಲ್ಲದೇ ಸ್ಯಾಂಟ್ರೋ ರವಿ ಸೇರಿದಂತೆ, ಹಗರಣದ ಪಮುಖ ಆರೋಪಿ ದಿವ್ಯಾ ಹಾಗರಗಿ ಅವರು ತೀರ್ಥಹಳ್ಳಿಗೆ ಬಂದು ಹೋಗಿದ್ದಾರೆ ಎನ್ನುವ ಮಾತಿದೆ. ಇದರ ಬಗ್ಗೆಯೂ ಸೂಕ್ತ ತನಿಖೆಯಾಗಬೇಕು.

ಪಿಎಸ್ ಐ ಹಗರಣದ ತನಿಖೆ ವೇಳೆ ಏಕೆ ಇವರನ್ನು ವಿಚಾರಣೆ ಮಾಡಿಲ್ಲ ಎನ್ನುವುದೇ ಆಶ್ಚರ್ಯ. ಜ್ಞಾನೇಂದ್ರ ಅವರು ಅಧಿಕಾರದಲ್ಲಿ ಇದ್ದಾಗ ತೀರ್ಥಹಳ್ಳಿ ಹಾಗೂ ಸುತ್ತಮುತ್ತ ಸಾಕಷ್ಟು ಅಕ್ರಮ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿದ್ದವು. ಇವರ ಬೆಂಬಲಿಗರು ರಿಯಲ್ ಎಸ್ಟೇಟ್ ಅಲ್ಲಿ ತೊಡಗಿಕೊಂಡಿದ್ದರು. ಇವರು ನಿರಪರಾಧಿ ಎಂದಾದರೆ ಸತ್ಯ ಹೊರಗೆ ಬರಲಿ. ಇದು ದ್ವೇಷದ ರಾಜಕಾರಣವಲ್ಲ.  ಬಿಟ್ ಕಾಯಿನ್ ಹಗರಣದಲ್ಲಿ ಜ್ಞಾನೇಂದ್ರ ಅವರ ಸ್ನೇಹಿತರು ಭಾಗಿಯಾಗಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ. ಇವರ ಸ್ನೇಹಿತರನ್ನು ತನಿಖೆಗೆ ಒಳಪಡಿಸಿಲ್ಲ, ಆದ ಕಾರಣಕ್ಕೆ ಸರ್ಕಾರ ಕೂಡಲೇ ಇದರ ಬಗ್ಗೆ ಗಮನ ಹರಿಸಬೇಕು. ಇವರ ಸ್ನೇಹಿತರೊಬ್ಬರು ಜೈಲಿಗೆ ಹೋಗಿ ಹೊರಬಂದಿದ್ದಾರೆ. ಅವರನ್ನು ಕೂಲಂಕುಷವಾಗಿ ಎಸ್ ಐಟಿ ತನಿಖೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು.

ತೀರ್ಥಹಳ್ಳಿ ಸುತ್ತ ಮುತ್ತವಿರುವ ಸರ್ಕಾರಿ ಜಮೀನು ಹಾಗೂ ಮಠಗಳಿಗೆ ಸೇರಿದ ಜಮೀನುಗಳನ್ನು ಮಾಜಿ ಗೃಹ ಸಚಿವರ ಕಡೆಯವರು ಖರೀದಿ ಮಾಡಿರುವ ಬಗ್ಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲೆಗಳಿವೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಭೂಮಿ ಖರೀದಿ ಬಗ್ಗೆ ತನಿಖೆಯಾಗಬೇಕು. ಈ ಬೇನಾಮಿ ಹಣ ಎಲ್ಲಿಂದ ಬಂದಿದೆ ತಿಳಿಯಬೇಕು.

ಅರಗ ಜ್ಞಾನೇಂದ್ರ ಅವರ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆಯಾಗುತ್ತದೆ. ಆತ ಬೆಳಗಿನ ಜಾವದ ತನಕ ಬದುಕಿರುತ್ತಾನೆ. ಆನಂತರ ಜ್ಞಾನೇಂದ್ರ ಅವರ ಸಂಬಂಧಿಕರೇ ಆಸ್ಪತ್ರೆಗೆ ಸೇರಿಸುತ್ತಾರೆ. ಆ ವ್ಯಕ್ತಿ ಮೃತನಾಗುತ್ತಾನೆ. ಈ ಪ್ರಕರಣದ ಬಗ್ಗೆ ಪೊಲೀಸರು ಎಂಟು ದಿನಗಳು ಕಳೆದರೂ ಕ್ರಮ ತೆಗೆದುಕೊಳ್ಳುವುದಿಲ್ಲ. ಮೃತ ವ್ಯಕ್ತಿಯ ಕುಟುಂಬದವರು ನನ್ನ ಬಳಿ ಮನವಿ ಮಾಡಿದಾಗ ಇದರ ಬಗ್ಗೆ ಸೂಕ್ತ ತನಿಖೆಗೆ ಒತ್ತಾಯಿಸಿದೆ.

ಈ ಪ್ರಕರಣದಲ್ಲಿ ಅರಗ ಅವರ ರಕ್ತಸಂಬಂಧಿಗಳು ಶಾಮೀಲಾಗಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ. ಆದರೆ ಪೊಲೀಸರು ಇದನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಮೃತ ವ್ಯಕ್ತಿಯ ಅತ್ತಿಗೆ ದೂರು ನೀಡಿದ್ದಾರೆ. ಈಕೆ ಜ್ಞಾನೇಂದ್ರ ಅವರ ಮನೆಗೆ ಕೆಲಸಕ್ಕೆ ಹೋಗುತ್ತಾರೆ. ಈ ಪ್ರಕರಣದ ವಿರುದ್ಧ ಸೂಕ್ತ ತನಿಖೆಯಾಗಲಿ ಎಂದು ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ನಾನು ಪ್ರಾಥಮಿಕ ಹಾಗೂ ಫ್ರೌಡ ಶಿಕ್ಷಣ ಸಚಿವನಾಗಿದ್ದಾಗ ತೀರ್ಥಹಳ್ಳಿಯಲ್ಲಿ ಶಾಲಾ ಬಾಲಕಿಯೊಬ್ಬಳ ಸಾವಾಯಿತು. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಯಿತು. ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಆ ಬಾಲಕಿಯ ಮೃತದೇಹ ಮೆರವಣಿಗೆ ಮಾಡಬೇಕು ಎಂದು ಹೇಳಲಾಯಿತು. ಆಗ ಅರಗ ಅವರು ಆ ಶಾಲಾ ಬಾಲಕಿಯ ದೇಹವನ್ನು ಮಸಿದೀಯ ಮುಂದೆ ತೆಗೆದುಕೊಂಡು ಹೋಗಬೇಕು ಎಂದು ಹಠ ಮಾಡುತ್ತಿದ್ದರು. ಮಸೀದಿಯ ಮುಂದೆ ಹೋದರೆ ಮಾತ್ರ ಬಿಜೆಪಿಯವರಿಗೆ ಸ್ವರ್ಗ ಸಿಗುತ್ತದೆ ಎಂದೆನಿಸುತ್ತದೆ. ಚುನಾವಣೆಗಾಗಿ ಆ ಮಗುವಿನ ವೈಕುಂಠ ಸಮಾರಾಧನೆಯನ್ನು ಮಾಡಿದರು. ಗೆದ್ದ ಮೇಲೆ ಆ ಬಾಲಕಿಯನ್ನು ಮರೆಯಲಾಯಿತು. ಅಮಿತ್ ಶಾ ಅವರೇ ನಿಮಗೆ  ತಾಕತ್ ಇದ್ದರೆ ಇದನ್ನು ಸಿಬಿಐ ತನಿಖೆಗೆ ನೀಡಿ ಎಂದು ಆಗ್ರಹಿಸಿದರು.

ಅರಗ ಜ್ಞಾನೇಂದ್ರ ಅವರ ಅವಧಿಯಲ್ಲಿ ಅವರೇ ಉದ್ಘಾಟನೆ ಮಾಡಿರುವ ಅಷ್ಟೂ ಕಟ್ಟಡಗಳು ಸೋರುತ್ತಿವೆ. ಗ್ರಾಮೀಣ ಅಭಿವೃದ್ಧಿ ಇಲಾಖೆಯ ಕಟ್ಟಡ ಉದ್ಘಾಟನೆಯ ದಿನವೇ ಸೋರುತ್ತಿತ್ತು. ಒಂದು ಕಟ್ಟಡದಲ್ಲಿ ಲಿಫ್ಟ್ ಅಳವಡಿಕೆ ಮಾಡಲಾಗಿತ್ತು. ಅದರಲ್ಲಿ ಸ್ವತಃ ಅವರೇ ಸಿಲುಕಿಕೊಂಡಿದ್ದರು. ಇದರ ಬಗ್ಗೆ ರಾಜ್ಯ ಸರ್ಕಾರ ಅರಗ ಜ್ಞಾನೇಂದ್ರ ಅವರ ವಿರುದ್ಧ ಎಸ್ ಐಟಿ ರಚನೆ ಮಾಡಬೇಕು ಎಂದು ಆರೋಪಗಳ ಸುರಿಮಳೆಗೈದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಖ್‌ ಸಮುದಾಯದ ವಿರುದ್ಧದ ಹೇಳಿಕೆಗೆ ರಾಹುಲ್‌ ಗಾಂಧಿ ವಿರುದ್ಧ ಮೂರು FIR