Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ: ಶೋಭಾ ಕರಂದ್ಲಾಜೆ

Shobha Karandlaje

Krishnaveni K

ಬೆಂಗಳೂರು , ಗುರುವಾರ, 19 ಸೆಪ್ಟಂಬರ್ 2024 (15:47 IST)
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಕೇಂದ್ರ ಸಚಿವೆ  ಶೋಭಾ ಕರಂದ್ಲಾಜೆ ಅವರು ಆಕ್ಷೇಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ಹಿಟ್ಲರ್ ಆಗಿದ್ದಾರೆ. ಬಿಜೆಪಿ ಸಂಸದರು ಮತ್ತು ಶಾಸಕರ ಮೇಲೆ ನಿರಂತರವಾಗಿ ಎಫ್‍ಐಆರ್‍ಗಳು ದಾಖಲಾಗುತ್ತಿವೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ; ಕೇಂದ್ರದ ಸಚಿವರ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ಟೀಕಿಸಿದರು.

ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯರ ಮೇಲೆ ಎಫ್‍ಐಆರ್ ದಾಖಲು ಮಾಡಿದ್ದಾರೆ. ಶಾಸಕರಾದ ಹರೀಶ್ ಪೂಂಜಾ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಭರತ್ ಶೆಟ್ಟಿ- ಹೀಗೆ ನಿರಂತರವಾಗಿ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಹತ್ತಿಕ್ಕುವ, ಅವರ ಧ್ವನಿ ಅಡಗಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರದ ನೇತೃತ್ವದಲ್ಲಿ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಾಂಗ್ಲಾ ಮಾದರಿಯಲ್ಲಿ ರಾಜ್ಯಪಾಲರನ್ನು ಓಡಿಸುತ್ತೇವೆ ಎಂದು ಐವನ್ ಡಿಸೋಜ ಅವರು ಹೇಳಿಕೆ ಕೊಟ್ಟಿದ್ದರು. ನಮ್ಮ ಮಂಗಳೂರಿನ ಜನರು, ಕಾರ್ಯಕರ್ತರು ದಿನವೂ ಪೊಲೀಸ್ ಸ್ಟೇಶನ್‍ಗೆ ಹೋಗುತ್ತಿದ್ದಾರೆ. ದೂರನ್ನೂ ನೀಡುತ್ತಿದ್ದಾರೆ. ಆದರೆ, ಇವತ್ತಿನ ತನಕ ದೂರನ್ನು ತೆಗೆದುಕೊಂಡಿಲ್ಲ ಎಂದು ವಿವರಿಸಿದರು. ಅವರ ಮೇಲೆ ಎಫ್‍ಐಆರ್ ದಾಖಲಿಸುತ್ತಿಲ್ಲವೇಕೆ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.
 
ಕರ್ನಾಟಕವನ್ನು ನೀವೇನು ಮಾಡಲು ಹೊರಟಿದ್ದೀರಿ?
ಕರ್ನಾಟಕವನ್ನು ನೀವೇನು ಮಾಡಲು ಹೊರಟಿದ್ದೀರಿ? ನಾಗಮಂಗಲದಲ್ಲಿ ಘಟನೆ ನಡೆಯಿತು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣೇಶನನ್ನು ಪೊಲೀಸ್ ವ್ಯಾನಿನಲ್ಲಿ ಕರೆದುಕೊಂಡು ಹೋಗಿ ವಿಸರ್ಜನೆ ಮಾಡುವ ಘಟನೆ ನಡೆದಿದೆ. ಯಾಕಾಗಿ ಹೀಗಾಗಿದೆ? ನಾಗಮಂಗಲದ ಗಣಪತಿಗೆ ನೀವು ಚಪ್ಪಲಿ ಎಸೆಯಲು ಅವಕಾಶ ಕೊಟ್ಟಿದ್ದೀರಿ. ಕಲ್ಲುಗಳನ್ನೂ ಎಸೆದರು. ಮೂರ್ತಿ ಭಗ್ನ ಆಯಿತು. ಮೂರ್ತಿಯನ್ನು ಅಲ್ಲೇ ಬಿಟ್ಟು ಓಡಿದರು. 25 ಅಂಗಡಿಗಳನ್ನು ಸುಟ್ಟು ಹಾಕಿದರು. ಆ ಜನರು ಯಾರು ಎಂದು ಕು. ಶೋಭಾ ಕರಂದ್ಲಾಜೆ ಅವರು ಪ್ರಶ್ನೆಯನ್ನು ಮುಂದಿಟ್ಟರು.

ನಾಗಮಂಗಲದ ಜನರಿಗೆ ಆ ಧೈರ್ಯ ಹೇಗೆ ಬಂತು? ಲಭಿಸಿದ ವರದಿ ಪ್ರಕಾರ ಕೇರಳದಿಂದ ಬಂದಿದ್ದಾರೆ ಎನ್ನುತ್ತಿದ್ದಾರೆ. ಅವರು ಯಾರು? ಹೇಗೆ ಮತ್ತು ಯಾಕೆ ಬಂದರು? ಇವತ್ತು ನಾಗಮಂಗಲದ ಕೇಸನ್ನೂ ನೀವು ಮುಚ್ಚಿ ಹಾಕಿದ್ದೀರಿ. ನಿಮ್ಮ ಪೊಲೀಸರು ಇದೊಂದು ಘಟನೆಯೇ ಅಲ್ಲ ಎಂಬಂತೆ ಆ ಕೇಸನ್ನು ಕ್ಲೋಸ್ ಮಾಡಿದ್ದಾರೆ ಎಂದು ದೂರಿದರು. ಪರಮೇಶ್ವರ್ ಅವರು ಇದೊಂದು ಚಿಕ್ಕ ಘಟನೆ ಎನ್ನುತ್ತಾರೆ. ಯಾವುದು ಚಿಕ್ಕ ಘಟನೆ ಪರಮೇಶ್ವರ್ ಅವರೇ ಎಂದು ಕೇಳಿದರು. 25 ಅಂಗಡಿ ಸುಟ್ಟದ್ದು ಚಿಕ್ಕ ಘಟನೆಯೇ? ಪಕ್ಕದ ರಾಜ್ಯದಿಂದ ಬಂದು ಗಲಭೆ ಮಾಡಿದ್ದು ಚಿಕ್ಕ ಘಟನೆಯೇ? ಎಂದರು.
 
ಅತ್ಯಂತ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಪರಶುರಾಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕ ಮತ್ತು ಶಾಸಕರ ಪುತ್ರ ಸೇರಿ ತಮಗೆ ಹಣ ಕೇಳಿದ್ದು, ಅದನ್ನು ಕೊಡಲು ನನಗೆ ಶಕ್ತಿ ಇಲ್ಲ; ನನಗೆ ಹಿಂಸೆ ಕೊಡುತ್ತಿದ್ದಾರೆ ಎಂದು ಹೇಳಿ ಸತ್ತರು. ಅವರ ಮೇಲೆ ಎಫ್‍ಐಆರ್ ದಾಖಲಿಸಲು ಹಿಂದೆ ಮುಂದೆ ನೋಡಿದ್ದೀರಿ ಎಂದು ಟೀಕಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಗರಣ ಮಾಡಿ ಸಿಕ್ಕಿ ಹಾಕಿಕೊಂಡ ಬಳಿಕ ನೀವು ಎಸ್‍ಐಟಿ ರಚಿಸಿದ್ದೀರಿ. ಎಸ್‍ಐಟಿ ವರದಿಯನ್ನು ಓದಿದ್ದೀರಾ ಸಿದ್ದರಾಮಯ್ಯನವರೇ? ಆ ವರದಿಯಲ್ಲಿ ನಾಗೇಂದ್ರ ಅವರ ಹೆಸರು ಯಾಕೆ ಇಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಅವರು ಅಪರಾಧಿ ಅಲ್ಲವೇ? ಎಂದು ಕೇಳಿದರು.
 
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆಗಳ ಹರಾಜು