Publish Date: Wed, 04 Feb 2026 (16:01 IST)
Updated Date: Wed, 04 Feb 2026 (16:47 IST)
ಬೆಂಗಳೂರು: ಸಿದ್ಧಾಪುರದಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಬಂಧಿಯಾಗಿರುವ ಜ್ಯೋತಿಷಿ ಕಮಲಾಕರ್ ಭಟ್‌ನನ್ನು ಬಿಜೆಪಿ ಶಾಸಕ ಸುರೇಶ್ ಕುಮಾರ್ ಪ್ರೋತ್ಸಾಹಿಸಿ ಬೆಳೆಸಿದ್ದು, ಇದರಲ್ಲಿ ಅವರ ಪಾತ್ರವು ಮುಖ್ಯವಾಗುತ್ತದೆಂಬ ಕೈ ನಾಯಕ ಬಿಕೆ ಹರಿಪ್ರಸಾದ್ ಆರೋಪಕ್ಕೆ ಬಿಜೆಪಿ ಮುಖಂಡ ಎಸ್. ಸುರೇಶ್ ಕುಮಾರ್ ಅವರು, ಫೇಸ್ಬುಕ್ ಪೋಸ್ಟ್ ಮೂಲಕ ತೀಕ್ಷ್ಣ ಪ್ರತಿಕ್ರಿಯಿಸಿದ್ದಾರೆ.
ಬಿ.ಕೆ. ಹರಿಪ್ರಸಾದ್ ಅವರೇ, ನಿಮ್ಮ ಫೇಸ್ಬುಕ್ ಬರಹವನ್ನು ಗಮನಿಸಿದೆ. ಕಾರವಾರದ ಸಿದ್ದಾಪುರದಲ್ಲಿ ನಡೆದ ಹೇಯ ಕೃತ್ಯವೊಂದನ್ನು ಮುಂದಿಟ್ಟುಕೊಂಡು, ಅದಕ್ಕೆ ರಾಜಕೀಯ ಬಣ್ಣ ಬಳಿದು, ನನ್ನ ಹೆಸರನ್ನು ತಳುಕು ಹಾಕಲು ನೀವು ನಡೆಸಿರುವ ಪ್ರಯತ್ನ ನಿಮ್ಮ "ಬೌದ್ಧಿಕ ದಿವಾಳಿತನ"ವನ್ನು ಎತ್ತಿ ತೋರಿಸುವಂತಿದೆ ಎಂದು ಕಿಡಿಕಾರಿದ್ದಾರೆ.
ಒಬ್ಬ ವ್ಯಕ್ತಿ ಮಾಡಿದ ಅಪರಾಧಕ್ಕೆ, ಆತನ ಪರಿಚಯವಿದ್ದ ಜನಪ್ರತಿನಿಧಿಯೇ ನೈತಿಕ ಹೊಣೆ ಹೊರಬೇಕು ಎಂಬ ನಿಮ್ಮ ವಾದ ಬಾಲಿಶವಾದದ್ದು. ಸಾರ್ವಜನಿಕ ಜೀವನದಲ್ಲಿರುವ ನಾವು ಸಾವಿರಾರು ಜನರನ್ನು ಭೇಟಿಯಾಗುತ್ತೇವೆ. ಯಾರೋ ಒಬ್ಬರು ನನ್ನ ಜೊತೆ ಫೋಟೋ ತೆಗೆಸಿಕೊಂಡರು ಅಥವಾ ಪರಿಚಯಸ್ಥರಾಗಿದ್ದರು ಎಂಬ ಒಂದೇ ಕಾರಣಕ್ಕೆ, ಅವರ ಖಾಸಗಿ ಬದುಕಿನ ವಿಕೃತಿಗಳಿಗೆ ಅಥವಾ ಅವರು ಎಸಗುವ ಕ್ರಿಮಿನಲ್ ಕೃತ್ಯಗಳಿಗೆ ನಾನು ಉತ್ತರದಾಯಿಯಾಗುತ್ತೇನೆಯೇ? ಹಾಗಾದರೆ, ನಿಮ್ಮ ಪಕ್ಷದ ನಾಯಕರ ಜೊತೆ ಫೋಟೊ ತೆಗೆಸಿಕೊಂಡವರು, ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು ಜೈಲು ಪಾಲಾದ ಉದಾಹರಣೆಗಳಿಲ್ಲವೇ? ಆಗ ನಿಮ್ಮ ನಾಯಕರುಗಳೆಲ್ಲ ಆ ಅಪರಾಧಗಳ ನೈತಿಕ ಹೊಣೆ" ಹೊತ್ತಿದ್ದಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಬಹಳ ಹಿಂದೆ ಯಶವಂತಪುರದ ಪೆಟ್ರೋಲ್ ಬಂಕ್ ಬಳಿ ನನ್ನ ಗಾಡಿಗೆ ಇಂಧನ ತುಂಬಿಸುತ್ತಿರುವಾಗ ಈ ವ್ಯಕ್ತಿಯ ಪರಿಚಯವಾಗಿತ್ತು. ನಾನು ಒಮ್ಮೆ ಮಾತ್ರ ಅವರನ್ನು ಭೇಟಿ ಮಾಡಿರುವುದು. ಈಗೇನಾದರೂ ನನಗೆ ಎದುರಿಗೆ ಸಿಕ್ಕರೆ ಅವರನ್ನು ಗುರುತು ಹಿಡಿಯುವುದೂ ಅಸಾಧ್ಯ. ನೀವು ನನಗೆ ಸಂವಿಧಾನದ ಆರ್ಟಿಕಲ್ 51ಎ(ಎಚ್) ಪಾಠ ಮಾಡಲು ಬಂದಿದ್ದೀರಿ. ಒಬ್ಬ ಮಾಜಿ ಕಾನೂನು ಸಚಿವನಾಗಿ ಸಂವಿಧಾನದ ಪ್ರತಿಯೊಂದು ಸಾಲಿನ ಮಹತ್ವ ನನಗೆ ಚೆನ್ನಾಗಿ ತಿಳಿದಿದೆ. ವೈಜ್ಞಾನಿಕ ಮನೋಭಾವ ಮತ್ತು ತಾರ್ಕಿಕತೆ ಎಂದರೆ, ಘಟನೆಗಳ ಸತ್ಯಾಸತ್ಯತೆಯನ್ನು ಅರಿಯದೇ, ಕೇವಲ ರಾಜಕೀಯ ದ್ವೇಷಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುವುದಲ್ಲ. ತನಿಖೆ ನಡೆಯುತ್ತಿರುವ ಗಂಭೀರ ಪ್ರಕರಣವೊಂದರಲ್ಲಿ, ನೇರ ಸಾಕ್ಷ್ಯಗಳಿಲ್ಲದೇ ಒಬ್ಬ ಶಾಸಕನ ಪಾತ್ರವಿದೆ ಎಂದು ತೀರ್ಪು ನೀಡುವುದು ಯಾವ ರೀತಿಯ ವೈಜ್ಞಾನಿಕ ಮನೋಭಾವ? ಇದು ಪಕ್ಕಾ ಪೂರ್ವಾಗ್ರಹ ಪೀಡಿತ ಮನಸ್ಥಿತಿ. ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ ಇದು ಕೊಳೆತ ಮನಸ್ಥಿತಿ ಎಂದು ಸುರೇಶ್ ಆಕ್ರೋಶ ಹೊರಹಾಕಿದ್ದಾರೆ.