Select Your Language

Notifications

webdunia
webdunia
webdunia
webdunia

ಹಕ್ಕು ಮತ್ತು ಕರ್ತವ್ಯಗಳು ಜೊತೆಯಾಗಿ ಹೋಗಬೇಕು: ಸಿಎಂ ಬಸವರಾಜ ಬೊಮ್ಮಾಯಿ

ಹಕ್ಕು ಮತ್ತು ಕರ್ತವ್ಯಗಳು ಜೊತೆಯಾಗಿ ಹೋಗಬೇಕು: ಸಿಎಂ ಬಸವರಾಜ ಬೊಮ್ಮಾಯಿ
bangalore , ಬುಧವಾರ, 26 ಜನವರಿ 2022 (21:04 IST)
ಬೆಂಗಳೂರು: ಸಂವಿಧಾನದತ್ತವಾಗಿ ಲಭ್ಯವಾಗಿರುವ ಹಕ್ಕುಗಳೊಂದಿಗೆ ಕರ್ತವ್ಯಗಳೂ ಇವೆ. ಹಕ್ಕು ಮತ್ತು ಕರ್ತವ್ಯಗಳು ಜೊತೆ ಜೊತೆಯಾಗಿ ಹೋಗಬೇಕು ಎನ್ನುವುದನ್ನು ಇಂದಿನ ಯುವಪೀಳಿಗೆಗೆ ನೆನಪು ಮಾಡಿಕೊಡುವ ದಿನವಿದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇಂದು ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ನಮಗೆ ಬಹಳಷ್ಟು ಹಕ್ಕುಗಳನ್ನು ಸಂವಿಧಾನ ನೀಡಿದೆ. ಆ ಹಕ್ಕುಗಳನ್ನು ಪಡೆಯುವ ಅರ್ಹತೆಯನ್ನು ಸಂಪಾದಿಸುವ ರೀತಿಯಲ್ಲಿ ನಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು.
ಪ್ರಜಾಪ್ರಭುತ್ವದ ತಳಹದಿಯ ಮೇಲೆ ದೇಶ ಗಣರಾಜ್ಯವಾಗಿದ್ದು, ರಾಜ್ಯಗಳ ಒಕ್ಕೂಟವೂ ಆಗಿದೆ. ಪ್ರತಿಯೊಂದು ರಾಜ್ಯವೂ ರಾಷ್ಟ್ರ ನಿರ್ಮಾಣದಲ್ಲಿ ಮುಂದಿರಬೇಕು. ಜನತೆಯೂ ರಾಷ್ಟ್ರ ನಿರ್ಮಾಣದತ್ತ ಗಮನ ಹರಿಸಬೇಕು. ದೇಶ ಮೊದಲು ಎನ್ನುವ ಭಾವನೆ ಇರಬೇಕು ಎಂದರು.
 
ದೇಶ ಕಟ್ಟಲು ನಮ್ಮನ್ನು ಸಮರ್ಪಿಸಿಕೊಳ್ಳುವ ದಿನ.
 ಕರ್ನಾಟಕ ಭಾರತ ಒಕ್ಕೂಟದಲ್ಲಿ ಪ್ರಬಲವಾದ ರಾಜ್ಯ. ಇದು ಆರ್ಥಿಕವಾಗಿ, ಸಾಮಾಜಿಕವಾಗಿ, ಕೌಶಲ್ಯಯುತವಾಗಿ, ಸಾಂಸ್ಕೃತಿಕವಾಗಿ ಕೊಡುಗೆ ನೀಡುವ ರಾಜ್ಯ. ಈ ಪರಂಪರೆಯನ್ನು ನಾವು ಉಳಿಸಿ ಬೆಳಸಬೇಕಿದೆ. ಇನ್ನಷ್ಟು ಉನ್ನತ ಮಟ್ಟಕ್ಕೆ ನಮ್ಮ ಪರಂಪರೆಯನ್ನು ಕೊಂಡೊಯ್ಯಬೇಕಿದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಚಿಂತನೆ ಹಾಗೂ ಕರ್ತವ್ಯವಿರಬೇಕು ಎಂದು ಜಾಗೃತಿ ಮೂಡಿಸುವ ದಿನ ಇದು ಎಂದರು.
 
ಗ್ರಾಮ ಒನ್- ಜನರ ಬಳಿಗೆ ಸೇವೆ:
ಗ್ರಾಮ ಒನ್ ಯೋಜನೆ ಗ್ರಾಮ ಪಂಚಾಯತ್ ನಲ್ಲಿ ಜಾತಿ, ಆದಾಯ ಪ್ರಮಾಣ ಪತ್ರಗಳು ಹಾಗೂ ಬ್ಯಾಂಕಿಂಗ್ ಸೇವೆಗಳು ಸೇರಿದಂತೆ ಹಲವಾರು ಸೇವೆಗಳನ್ನು ಒದಗಿಸುವ ವಿಶಿಷ್ಟ ಯೋಜನೆ. ಇದಕ್ಕಾಗಿ ಗ್ರಾಮಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು 12 ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗಲಿದೆ. ಸುಮಾರು 3000 ಗ್ರಾಮ ಪಂಚಾಯತ್ ಗಳಲ್ಲಿ ಪ್ರಾರಂಭವಾಗಲಿದೆ. ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯೋಜನೆಯನ್ನು ವಿಸ್ತರಿಸಲಾಗುವುದು.
ಜನರ ಬಳಿಗೆ ಸರಕಾರ ಮತ್ತು ಸೇವೆಗಳು ತಲುಪಬೇಕು ಎಂಬ ನೀತಿಯ ಆಧಾರದ ಮೇಲೆ ಯೋಜನೆಯನ್ನು ರೂಪಿಸಲಾಗಿದೆ. ಇದೊಂದು ಕ್ರಾಂತಿಕಾರಿ ಯೋಜನೆಯಾಗಿದೆ. ಎಲ್ಲರೂ ಸಹಕರಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕರ ನೇಮಕ - ಸಚಿವ ನಾಗೇಶ್