ಕೋರ್ಟ್ ನಿರ್ದೇಶನದಂತೆ ಬೆಂಗಳೂರು ನಗರದಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಅನಧಿಕೃತ ಫ್ಲೆಕ್ಸ್ ನಿರ್ಬಂಧ ಹೇರಲಾಗುವುದು. ಈ ನಿರ್ಧಾರ ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು. ಒಂದು ವೇಳೆ ಅನಧಿಕೃತ ಫ್ಲೆಕ್ಸ್ ಹಾಕಿದರೆ ಅವರು ಯಾರೇ ಆದರೂ ಪಾಲಿಕೆ ಅಧಿಕಾರಿಗಳು ಎಫ್ಐಆರ್ ದಾಖಲಿಸಿ, ಒಂದು ಫ್ಲೆಕ್ಸ್ ಗೆ ತಲಾ 50 ಸಾವಿರ ದಂಡ ವಿಧಿಸಲಿದ್ದಾರೆ ಎಂದು ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ...ಅನಧಿಕೃತ ಫ್ಲೆಕ್ಸ್ ತೆರವಿಗೆ ಕೋರ್ಟ್ ಮೂರು ವಾರಗಳ ಗಡವು ನೀಡಿದೆ. ನನ್ನದೂ, ಮುಖ್ಯಮಂತ್ರಿಗಳದ್ದೂ ಸೇರಿದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಎಲ್ಲ ಅನಧಿಕೃತ ಫ್ಲೆಕ್ಸ್ ಗಳನ್ನು ನಿಷೇಧಿಸಲಾಗುವುದು. ಈ ವಿಚಾರವಾಗಿ ನಮ್ಮ ಸಚಿವರು ಹಾಗೂ ನಾಯಕರಿಗೆ ಮನವಿ ಮಾಡಿದ್ದೇನೆ. ಫ್ಲೆಕ್ಸ್ ನಿಷೇಧ ಕುರಿತು ಮುಂದಿನ ದಿನಗಳಲ್ಲಿ ನೀತಿ ರೂಪಿಸುತ್ತೇವೆ. ಇನ್ನು ಮುಂದೆ ಜನ್ಮದಿನ, ಶ್ರದ್ಧಾಂಜಲಿ, ಶುಭ ಸಂದೇಶ, ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ವಿಚಾರ ಸೇರಿದಂತೆ ಯಾವುದೇ ಅನಧಿಕೃತ ಫ್ಲೆಕ್ಸ್ ಹಾಕುವಂತಿಲ್ಲ. ಇದಕ್ಕೆ ಎಲ್ಲಾ ಪಕ್ಷಗಳು ಹಾಗೂ ನಾಗರೀಕರು ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ. ಸರ್ಕಾರದಿಂದ ಫ್ಲೆಕ್ಸ್ ಹಾಕುವುದಿದ್ದರೆ, ಸಮಯ, ಅಳತೆ, ಸ್ಥಳ ನಿಗದಿ ಮಾಡಿ ಅನುಮತಿ ನೀಡಲಾಗುವುದು. ಇದಕ್ಕೂ ನೀತಿ ರೂಪಿಸಲಾಗುತ್ತಿದೆ. ಈಗಾಗಲೇ ನಗರದಲ್ಲಿ 59 ಸಾವಿರ ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲಾಗಿದೆ. 134 ದೂರುಗಳು ಬಂದಿದ್ದು, 40 ಎಫ್ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡ್ರು