ಚಿತ್ರದುರ್ಗ: ನಟ ದರ್ಶನ್ ಆಂಡ್ ಗ್ಯಾಂಗ್ ನ ಹಲ್ಲೆಯಿಂದಾಗಿ ಕೊಲೆಗೀಡಾಗಿದ್ದಾನೆ ಎಂದು ಆರೋಪಿಸಲಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿಯ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಈ ಕಾರಣಕ್ಕೆ ಆತನ ಪತ್ನಿಗೆ ಈಗ ಸರ್ಕಾರ ನೌಕರಿ ಕೊಡಿಸುವುದಾಗಿ ಶಾಸಕ ಟಿ ರಘುಮೂರ್ತಿ ಭರವಸೆ ನೀಡಿದ್ದಾರೆ.
ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ್ದು 1 ಲಕ್ಷ ರೂ.ಗಳ ಧನ ಸಹಾಯ ಮಾಡಿದ್ದಾರೆ. ಜೊತೆಗೆ ಕುಟುಂಬ ರೇಣುಕಾಸ್ವಾಮಿಯನ್ನು ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಹೀಗಾಗಿ ಆತನ ಪತ್ನಿ ಸಹನಾಗೆ ಸರ್ಕಾರೀ ನೌಕರಿ ಕೊಡಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.
ಈಗಾಗಲೇ ಹಲವು ಬಾರಿ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಅನುಕಂಪದ ಆಧಾರದಲ್ಲಿ ಸೊಸೆಗೆ ಸರ್ಕಾರೀ ನೌಕರಿ ಕೊಡಿಸಿ ಎಂದು ಕಣ್ಣೀರು ಹಾಕಿ ಕೇಳಿಕೊಂಡಿದ್ದರು. ಸಿಎಂ ಸಿದ್ದರಾಮಯ್ಯಗೂ ಈ ಸಂಬಂಧ ಅವರು ಮನವಿ ಮಾಡಿದ್ದರು. ಆದರೆ ಇದುವರೆಗೆ ಸರ್ಕಾರೀ ನೌಕರಿ ದೊರೆತಿಲ್ಲ.
ಇದೀಗ ಶಾಸಕ ಟಿ ರಘುಮೂರ್ತಿ ಭರವಸೆ ನೀಡಿದ್ದು ಮುರುಘಾ ಮಠ, ಸಿರಿಗೆರೆ ತರಳಬಾಳು ಮಠದ ಸಂಸ್ಥೆಯನ್ನು ಸಂಪರ್ಕಿಸಿ ಕೆಲಸ ಕೊಡಿಸುವ ಪ್ರಯತ್ನ ಮಾಡಿದ್ದಾರೆ. ಇದಲ್ಲದಿದ್ದರೆ ಯಾವುದಾದರೂ ಅನುದಾನಿತ ಸಂಸ್ಥೆಯಲ್ಲಿ ಕ್ಲರ್ಕ್ ಕೆಲಸವಾದರೂ ಕೊಡಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.