ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಇಂದು ಜೈಲಿನ ನರಕದಿಂದ ಬೇಸತ್ತು ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕೇಳಿಕೊಂಡಿದ್ದರು. ನ್ಯಾಯಾಧೀಶರು ಕೊನೆಗೂ ಇಂದು ದರ್ಶನ್ ಗೆ ಬಿಗ್ ರಿಲೀಫ್ ನೀಡಿದ್ದಾರೆ.
ನನಗೆ ಬೆನ್ನು ನೋವು ಕಾಡುತ್ತಿದೆ. ಜೈಲಿನಲ್ಲಿ ಹಾಸಿಗೆ, ದಿಂಬು ಬಳಸಲು ಅವಕಾಶ ಕೊಡಿ ಎಂದು ದರ್ಶನ್ ಕೋರ್ಟ್ ಮೊರೆ ಹೋಗಿದ್ದರು. ಅವರ ಮನವಿಯನ್ನು ಪುರಸ್ಕರಿಸಿರುವ ಕೋರ್ಟ್ ಹೆಚ್ಚುವರಿ ಹಾಸಿಗೆ, ದಿಂಬು ನೀಡಲು ಅನುಮತಿ ನೀಡಿದೆ. ಅಲ್ಲದೆ ಜೈಲಿನಲ್ಲಿ ಒಂದು ತಿಂಗಳಿನಿಂದ ಬಿಸಿಲು ನೋಡಿಲ್ಲ. ಕೈಗಳಿಗೆ ಫಂಗಸ್ ಬಂದಿದೆ ಎಂದು ದರ್ಶನ್ ಹೇಳಿದ್ದರು. ಅದರಂತೆ ಕೋರ್ಟ್ ಈಗ ಅವರಿಗೆ ಜೈಲಿನ ಆವರಣದಲ್ಲಿ ಓಡಾಡಲು ಅವಕಾಶ ಕೊಟ್ಟಿದೆ.
ಇನ್ನು, ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು. ಈ ವಿಚಾರದಲ್ಲೂ ಕೋರ್ಟ್ ದರ್ಶನ್ ಪರವಾಗಿ ತೀರ್ಪು ನೀಡಿದೆ. ಸದ್ಯಕ್ಕೆ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಯಾವುದೇ ಸಕಾರಣಗಳಿಲ್ಲ. ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಿಸುವಂತೆ ಆದೇಶ ನೀಡಿದೆ.
ಆದರೆ ಜೈಲು ಕೈಪಿಡಿಯನ್ನು ಅನುಸರಿಸಬೇಕು. ಉಲ್ಲಂಘಿಸಿದಲ್ಲಿ ಜೈಲು ಐಜಿಯಿಂದ ಕ್ರಮ ಜರುಗಿಸಬೇಕು. ನಿಯಮ ಉಲ್ಲಂಘಿಸಿದರೆ ಬೇರೆ ಜೈಲಿಗೆ ಸ್ಥಳಾಂತರಿಸಬೇಕಾಗುತ್ತದೆ ಎಂದೂ ಎಚ್ಚರಿಕೆಯನ್ನು ನೀಡಿದೆ.