ಚಿತ್ರದುರ್ಗ: ಕೆಲವು ತಿಂಗಳ ಹಿಂದೆ ಕೊಲೆಯಾದ ರೇಣುಕಾಸ್ವಾಮಿ ಅವರ ಪುತ್ರನ ನಾಮಕರಣ ಕಾರ್ಯ ಚಿತ್ರದುರ್ಗದ ವಿಆರ್‌ಡಸ್ ಬಡಾವಣೆಯ ಅವರ ಮನೆಯಲ್ಲಿ ನಡೆಯಿತು. ಜಂಗಮ ಸಂಪ್ರದಾಯದಂತೆ ನಾಮಕರಣ ಶಾಸ್ತ್ರ ನೆರವೇರಿಸಿದರು. ಮಗುವಿಗೆ ಶಶಿಧರ್ ಸ್ವಾಮಿ ಎಂದು ನಾಮಕರಣ ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅವರ ಗೆಳತಿ ಪವಿತ್ರಾ ಗೌಡ ಹಾಗೂ ಸಹಚರರಲ್ಲಿ ಬಂಧಿಸಿಲಾಗಿತ್ತು. ಈಗ ಎಲ್ಲಾ ಆರೋಪಿಗಳು ಹೈಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆಯಾದಾಗ ಅವರ ಪತ್ನಿ ಸಹನಾ ಐದು ತಿಂಗಳ ಗರ್ಭಿಣಿಯಾಗಿದ್ದರು. ನಂತರ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು.
ರೇಣುಕಾಸ್ವಾಮಿ ಪುತ್ರನಿಗೆ ಶಶಿಧರ್ ಸ್ವಾಮಿ ಎಂದು ರೇಣುಕಾಸ್ವಾಮಿ ಸಹೋದರಿ ಸುಚೇತ ಮಗುವಿಗೆ ಹೆಸರಿಟ್ಟರು. ಮಗುಗೆ ಜೇನುತುಪ್ಪ ತಿನ್ನಿಸಿ ನಾಮಕರಣ ನೆರವೇರಿಸಿದ ಸುಚೇತ, ಮಗುವಿನ ಕಿವಿಯಲ್ಲಿ ಹೆಸರು ಹೇಳಿದರು. ರೇಣುಕಾಸ್ವಾಮಿ ಅವರ ತಂದೆ ಕಾಶಿನಾಥ್ ಶಿವನಗೌಡ ಹಾಗೂ ತಾಯಿ ರತ್ನಪ್ರಭ ಮೊಮ್ಮಗನನ್ನು ಎತ್ತಿಕೊಂಡು ಮುದ್ದಾಡಿದ್ದರು.
ಮನೆ ಮುಂದೆ ತೊಟ್ಟಿಲು ಇಟ್ಟು ಸಿದ್ಧತೆ ನಡೆಸಿದ್ದು, ಕುಟುಂಬದ ಬಂಧುಗಳ ಸಮ್ಮುಖದಲ್ಲಿ ಮಗುವಿನ ನಾಮಕರಣ ಶಾಸ್ತ್ರ ನೆರವೇರಿತು. ಮೊಮ್ಮಗ ಶಶಿಧರ್ ಸ್ವಾಮಿ ಕೈ ಬೆರಳಿಗೆ ಉಂಗುರ ಹಾಕಿ ಕಾಶಿನಾಥ್ ಶಿವನ ಗೌಡ ಖುಷಿಪಟ್ಟರು. ಅಜ್ಜಿ ರತ್ನಪ್ರಭಾ ಅವರು ಮೊಮ್ಮಗನಿಗೆ ಬೆಳ್ಳಿ ಉಡುದಾರ ಹಾಕಿದರು.