ನಗರದ ಫೀ.ಮಾ.ಕಾರ್ಯಪ್ಪ ವೃತ್ತದಲ್ಲಿ ನಾಪತ್ತೆಯಾಗಿದ್ದ ಫೀ.ಮಾ.ಕೆ.ಎಂ.ಕಾರ್ಯಪ್ಪ ನಾಮಫಲಕವನ್ನು ಮರು ಸ್ಥಾಪಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ್ದ ದೂರುದಾರರಾದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಹಾಗೂ ಕೊಡಗು ಪೀಪಲ್ಸ್ ಫೋರಂ ನ ಅಧ್ಯಕ್ಷ ಮಾದೇಟಿರ ತಿಮ್ಮಯ್ಯ ಫಲಕಕ್ಕೆ ಹೂವಿನ ಮಾಲೆ ಹಾಕಿ ಹರ್ಷ ವ್ಯಕ್ತಪಡಿಸಿದರು.
ಫೀ.ಮಾ.ಕಾರ್ಯಪ್ಪ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಪ್ರತಿಮೆಗೂ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಶಿವಕುಮಾರ್ ನಾಣಯ್ಯ, ನಾಮಫಲಕ ನಾಪತ್ತೆಯಾಗಿದ್ದ ಪ್ರಕರಣದ ಕುರಿತು ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಗಮನ ಸೆಳೆಯಲಾಗಿತ್ತು. ಇದೀಗ ನೂತನ ನಾಮಫಲಕವನ್ನು ಅಳವಡಿಸಲಾಗಿದ್ದು, ಇದು ಸ್ವಾಗತಾರ್ಹ ಕ್ರಮವಾಗಿದೆ ಎಂದರು.
ಈಗಾಗಲೇ ಪೊಲೀಸರಿಗೆ ದೂರು ನೀಡಿರುವುದರಿಂದ ನಾಮಫಲಕ ನಾಪತ್ತೆಗೆ ಕಾರಣ ಏನು ಎನ್ನುವುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಿದರೆ ಗೊಂದಲ ನಿವಾರಣೆಯಾಗಲಿದೆ. ಅಲ್ಲದೆ ಇನ್ನು ಮುಂದೆ ಈ ರೀತಿಯ ಪ್ರಕರಣಗಳು ನಡೆಯದಂತೆ ಜನ ಜಾಗೃತಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಪ್ಪ ವೃತ್ತವನ್ನು ವೈಜ್ಞಾನಿಕ ರೂಪದಲ್ಲಿ ನಿರ್ಮಿಸಬೇಕೆಂದು ಶಿವಕುಮಾರ್ ನಾಣಯ್ಯ ಇದೇ ಸಂದರ್ಭ ಒತ್ತಾಯಿಸಿದರು.
ಪ್ರಮುಖರಾದ ಒಡಿಯಂಡ ನವೀನ್ ತಿಮ್ಮಯ್ಯ, ಮಾಜಿ ಯೋಧ ಎಸ್.ಸುಧೀರ್ ಮತ್ತಿತರರು ಹಾಜರಿದ್ದು ಕಾರ್ಯಪ್ಪ ಅವರಿಗೆ ಗೌರವ ಅರ್ಪಿಸಿದರು.