Publish Date: Wed, 12 Apr 2023 (08:11 IST)
Updated Date: Wed, 12 Apr 2023 (10:13 IST)
ಹುಬ್ಬಳ್ಳಿ : ಯಾವುದೇ ಸಮಯದಲ್ಲಿ ನಿವೃತ್ತಿ ಘೋಷಣೆ ಮಾಡಲು ಸಿದ್ಧ. ಆದರೆ ಅದು ಗೌರವಯುತವಾಗಿ ಆಗಬೇಕು. ಈ ರೀತಿಯಲ್ಲಿ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ನಾನು ಆಕ್ಸಿಡೆಂಟ್ ಆಗಿ ರಾಜಕೀಯಕ್ಕೆ ಬಂದವನು. ಯಾವುದೇ ಸಮಯದಲ್ಲಿ ನಿವೃತ್ತಿ ಆಗಲು ಸಿದ್ಧನಿದ್ದೇನೆ. ಆದರೆ ರಾಜಕಾರಣದಲ್ಲಿ ಗೌರವಯುತವಾಗಿ ಹೊರಗಡೆ ಹೋಗಬೇಕು.
ಈ ರೀತಿ ಪಕ್ಷದಿಂದ ಹೊರಗಡೆ ಹೋಗಬಾರದು. ರಾಷ್ಟ್ರೀಯ ಅಧ್ಯಕ್ಷರು ಫೋನ್ ಮಾಡಿದ್ದಕ್ಕೆ ನಾನು ದೆಹಲಿಗೆ ಹೋಗುತ್ತಿದ್ದೇನೆ. ಚರ್ಚೆ ಮಾಡೋಣ ಬನ್ನಿ ಎಂದು ಹೇಳಿದ್ದಾರೆ. ಪಾಸಿಟಿವ್ ಹೋಪ್ನಲ್ಲಿ ನಾನಿದ್ದೇನೆ ಎಂದು ತಿಳಿಸಿದರು.
ಪಕ್ಷದ ದೃಷ್ಟಿಯಿಂದ ಎಲ್ಲಾ ಒಳ್ಳೆಯದು ಆಗುತ್ತದೆ ಎಂದು ಹೋಗುತ್ತಿದ್ದೇನೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಬೇಕಿತ್ತು. ಆದರೆ ವಿಮಾನಕ್ಕೆ ತಡವಾಗಿದ್ದರಿಂದ ನೇರವಾಗಿ ದೆಹಲಿಗೆ ಹೋಗುತ್ತಿದ್ದೇನೆ. ದೆಹಲಿಗೆ ಹೋಗಿ ಬಂದ ನಂತರ ಬಿಎಸ್ವೈ ಭೇಟಿ ಮಾಡುತ್ತೇನೆ ಎಂದು ಸ್ಪಷ್ಟ ಪಡಿಸಿದರು.