ಬೆಂಗಳೂರು: ರಾಜ್ಯದಲ್ಲಿ ಪಡಿತರ ಚೀಟಿ ವ್ಯವಸ್ಥೆಯಲ್ಲಿ ಪಡಿತರ ಪಡೆಯುತ್ತಿರುವವರಿಗೆ ಶಾಕಿಂಗ್ ಸುದ್ದಿ ಕಾದಿದೆ. ಪಡಿತರ ಆಹಾರದ ಸುರಕ್ಷತೆ ಬಗ್ಗೆ ಈಗ ಅನುಮಾನ ಮೂಡಿದೆ.
ಬಿಪಿಎಲ್ ಸೇರಿದಂತೆ ರೇಷನ್ ಕಾರ್ಡ್ ದಾರರಿಗೆ ಸರ್ಕಾರ ಕೊಡುವ ಅಕ್ಕಿ, ಬೇಳೆ ಮುಂತಾದ ಆಹಾರ ಪದಾರ್ಥಗಳನ್ನು ವಿಷಕಾರೀ ಅಂಶದ ಜೊತೆಗೇ ದಾಸ್ತಾನು ಮಾಡಿ ಇಡಲಾಗುತ್ತಿದೆ ಎಂಬ ಶಾಕಿಂಗ್ ವಿಚಾರ ಬಹಿರಂಗವಾಗಿದೆ. ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು (ಸಿಎಜಿ) ವರದಿಯಲ್ಲಿ ಇದು ಬಹಿರಂಗವಾಗಿದೆ.
2017 ರಿಂದ 2022 ರವರೆಗೆ ಸಿಎಜಿ ಕೆಲವು ಜಿಲ್ಲೆಗಳಲ್ಲಿ ನಡೆದ ಸಮೀಕ್ಷೆಯಿಂದ ಇದು ಬೆಳಕಿಗೆ ಬಂದಿದೆ. ಆಹಾರ ಧಾನ್ಯಗಳನ್ನು ಕೀಟನಾಶಕಗಳು, ರಸಗೊಬ್ಬರದ ಜೊತೆ ದಾಸ್ತಾನು ಮಾಡುವ ವಿಚಾರ ಬಹಿರಂಗವಾಗಿದೆ. ಇದು ಆತಂಕಕಾರೀ ವಿಚಾರವಾಗಿದ್ದು ಲೋಪದೋಷಗಳನ್ನು ಸರಿಪಡಿಸಲು ಸಿಎಜಿ ಶಿಫಾರಸ್ಸು ಮಾಡಿದೆ.
ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿಡಬೇಕು. ಆಹಾರ ಗೋದಾಮಿನ ನಿರ್ವಹಣೆಗೆ ಮಾರ್ಗಸೂಚಿಗಳನ್ನು ಹಾಕಬೇಕು. ನ್ಯಾಯಬೆಲೆ ಅಂಗಡಿಗಳನ್ನೂ ಸರ್ಕಾರ ನಿಯಮಿತವಾಗಿ ತಪಾಸಣೆ ಮಾಡಬೇಕು ಮತ್ತು ತಪ್ಪಿತಸ್ಥ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು ಮಾಡಬೇಕು ಎಂದು ಸಿಎಜಿ ಶಿಫಾರಸ್ಸು ಮಾಡಿದೆ.