ಬೆಂಗಳೂರು : ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಹಠಸಂಭೋಗ ನಡೆಸಿದ,
ಪ್ರಕರಣದಲ್ಲಿ ನಗರದ ಇಟ್ಟಮಡು ನಿವಾಸಿ ಬಾಬು ಅಲಿಯಾಸ್ ಚಿಟ್ಟಿಬಾಬು ಎಂಬಾತನಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ) ಅಡಿ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ 3ನೇ ಹೆಚ್ಚುವರಿ ತ್ವರಿತಗತಿ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಇಷ್ರತ್ ಜಹಾನ್ ಅವರು ಅತ್ಯಾಚಾರ, ಅಪಹರಣ ಮತ್ತು ಅಪ್ರಾಪ್ತೆಯ ಮೇಲ ಲೈಂಗಿಕ ದೌರ್ಜನ್ಯ ಆರೋಪದಡಿ ಬಾಬು ದೋಷಿ ಎಂದು ತೀರ್ಮಾನಿಸಿದರು.
ಅತ್ಯಾಚಾರ ಪ್ರಕರಣದಡಿ 10 ವರ್ಷ ಕಠಿಣ ಜೈಲು, ಐದು ಸಾವಿರ ರು. ದಂಡ ಮತ್ತು ಅಪಹರಣ ಆರೋಪದಡಿ ಏಳು ವರ್ಷ ಜೈಲು, ಐದು ಸಾವಿರ ರು. ದಂಡ ವಿಧಿಸಿ ಆದೇಶಿಸಿದರು.
ಅಲ್ಲದೆ, ಅಪ್ರಾಪ್ತೆ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಹಿನ್ನೆಲೆಯಲ್ಲಿ ಲೈಂಗಿಕ ಅಪರಾಧ ಕೃತ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆಯ ಸೆಕ್ಷನ್ 5 ಮತ್ತು 6ರ ಅಡಿಯಲ್ಲಿ ಬಾಬುಗೆ 20 ವರ್ಷ ಕಠಿಣ ಜೈಲು ಮತ್ತು ಐದು ಸಾವಿರ ರು. ದಂಡ ವಿಧಿಸಿದರು.
ಆರೋಪಿ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕು ಎಂದು ಸ್ಪಷ್ಟಪಡಿಸಿಸಿದ ನ್ಯಾಯಾಧೀಶರು, ಸಂತ್ರಸ್ತೆಗೆ ನಾಲ್ಕು ಲಕ್ಷ ರು. ಪರಿಹಾರವಾಗಿ ನೀಡುವಂತೆ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ. ಆರೋಪಿಗೆ ವಿಧಿಸಿರುವ ದಂಡದಲ್ಲಿ 10 ಸಾವಿರ ರು. ಸಂತ್ರಸ್ತೆಗೆ ನೀಡಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.