Publish Date: Tue, 28 Jun 2022 (09:33 IST)
Updated Date: Mon, 27 Jun 2022 (23:38 IST)
ಡೆಹ್ರಾಡೂನ್ : ಚಲಿಸುತ್ತಿರುವ ಕಾರಿನಲ್ಲಿ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗಳ ಮೇಲೆ ದುಷ್ಕರ್ಮಿಗಳು ಅತ್ಯಾಚಾರಗೈದಿರುವ ಘಟನೆ ಹರಿದ್ವಾರದ ರೂರ್ಕಿಯಲ್ಲಿ ನಡೆದಿದೆ.
ಭಾನುವಾರ ಮುಸ್ಲಿಂ ಧಾರ್ಮಿಕ ಕ್ಷೇತ್ರವಾದ ಪಿರಾನ್ ಕಲಿಯಾರ್ನಿಂದ ಮಹಿಳೆ ತನ್ನ ಆರು ವರ್ಷದ ಮಗಳೊಂದಿಗೆ ಮನೆಗೆ ಹೋಗುತ್ತಿದ್ದ ವೇಳೆ ಸೋನು ಎಂಬ ವ್ಯಕ್ತಿ ಲಿಫ್ಟ್ ನೀಡುವ ನೆಪದಲ್ಲಿ ಕೃತ್ಯವೆಸಗಿದ್ದಾನೆ. ಇದೇ ವೇಳೆ ಸೋನು ಜೊತೆಗೆ ಕಾರಿನಲ್ಲಿದ್ದ ಕೆಲವು ಸ್ನೇಹಿತರು ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ಕಾರು ಹತ್ತಿದ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಸೋನು ಮತ್ತು ಆತನ ಸಹಚರರು ಅತ್ಯಾಚಾರವೆಸಗಿ ನಂತರ ಕಾಲುವೆವೊಂದರ ಬಳಿ ಇಬ್ಬರನ್ನು ತಳ್ಳಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಪ್ರಮೇಂದ್ರ ದೋವಲ್ ಹೇಳಿದ್ದಾರೆ.
ನಂತರ ಮಹಿಳೆ ಸ್ಥಳೀಯರ ಸಹಾಯದಿಂದ ಮಧ್ಯರಾತ್ರಿ ಪೊಲೀಸ್ ಠಾಣೆಗೆ ತಲುಪಿ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ವಿಚಾರಣೆ ವೇಳೆ ಕಾರಿನಲ್ಲಿ ಎಷ್ಟು ಮಂದಿ ಇದ್ದರು ಎಂಬುವುದು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಹೆಸರು ಸೋನು ಎಂದು ಗುರುತಿಸಿದ್ದಾರೆ.