ಬೆಂಗಳೂರು: ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ಆಧಾರಿತ ತಾರತಮ್ಯ ಹೋಗಲಾಡಿಸಲು ರೋಹಿತ್ ವೆಮುಲಾ ಕಾಯಿದೆ ಜಾರಿಗೊಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದು ಇದಕ್ಕೆ ಸಿಎಂ ಕೂಡಾ ಯೆಸ್ ಬಾಸ್ ಎಂದು ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ.
ದೇಶದಲ್ಲಿ ಹಿಂದುಳಿತ ವರ್ಗದವರಿಗೆ ಶಿಕ್ಷಣ ಸಂಸ್ಥೆಗಳಲ್ಲಿ, ಉದ್ಯೋಗದಲ್ಲಿ ಹೆಚ್ಚು ಅವಕಾಶ ಸಿಗುವಂತಾಗಬೇಕು ಎಂದು ರಾಹುಲ್ ಗಾಂಧಿ ಹೇಳುತ್ತಲೇ ಬಂದಿದ್ದಾರೆ. ಇದೀಗ ಕರ್ನಾಟಕ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ರಾಹುಲ್, ರಾಹುಲ್ ವೇಮುಲಾ ಕಾಯ್ದೆ ಜಾರಿಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಏಪ್ರಿಲ್ 16 ರಂದು ರಾಹುಲ್ ಪತ್ರ ಬರೆದಿದ್ದು ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನಿಮಗೆ ಸಾಮಾಜಿಕ ನ್ಯಾಯದ ಕುರಿತಾಗಿರುವ ಬದ್ಧತೆಯನ್ನು ಇದು ಸೂಚಿಸುತ್ತದೆ ಎಂದು ಅಭಿನಂದಿಸಿದ್ದಾರೆ. ನಮ್ಮ ಸರ್ಕಾರ ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸಲು ಬದ್ಧವಾಗಿದೆ. ಸದ್ಯದಲ್ಲೇ ಈ ಕಾಯಿದೆಯನ್ನು ನಾವು ಜಾರಿಗೆ ತರಲಿದ್ದೇವೆ ಎಂದಿದ್ದಾರೆ.
ರೋಹಿತ್ ವೇಮುಲಾ ಜಾತಿಯ ಕಾರಣಕ್ಕೆ ಉನ್ನತ ಶಿಕ್ಷಣ ಅವಕಾಶ ವಂಚಿತರಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಅಂತಹ ಘಟನೆಗಳು ಮತ್ತೆ ಯಾರಿಗೂ ಆಗಬಾರದು ಎಂಬ ಉದ್ದೇಶಕ್ಕೆ ಈ ಕಾಯಿದೆಯನ್ನು ಜಾರಿಗೊಳಿಸಬೇಕು ಎಂದು ರಾಹುಲ್ ಪತ್ರದಲ್ಲಿ ಹೇಳಿದ್ದಾರೆ.