ಬೆಂಗಳೂರು: ಜಾತಿಗಣತಿ ವರದಿ ಬಗ್ಗೆ ನಿನ್ನೆ ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಿದೆ. ಈ ವಿಚಾರವಾಗಿ ಬಹುತೇಕ ಸಚಿವರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಅದರಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ಸಿಟ್ಟಿಗೆದ್ದು ಲಿಂಗಾಯತ, ಒಕ್ಕಲಿಗರಲ್ಲೂ ಬಡವರಿಲ್ವಾ ಎಂದು ಕೂಗಾಡಿದ ಘಟನೆ ನಡೆದಿದೆ.
ನಿನ್ನೆ ಸಂಜೆ ಜಾತಿಗಣತಿ ವಿಚಾರ ಚರ್ಚಿಸಲೆಂದೇ ಸಚಿವ ಸಂಪುಟ ಸಭೆ ಕರೆಯಲಾಗಿತ್ತು. ಆದರೆ ಜಾತಿಗಣತಿ ವರದಿ ಸಮರ್ಪಕವಾಗಿಲ್ಲ ಎಂದು ಬಹುತೇಕ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಕೂಡಾ ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಾತಿ ವರ್ಗೀಕರಣ ವಿಚಾರದಲ್ಲಿ ಡಿಕೆ ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏರು ಧ್ವನಿಯಲ್ಲೇ ಆಕ್ರೋಶ ಹೊರಹಾಕಿದ್ದಾರೆ. ಕೆಲವು ನಿಗದಿತ ಜಾತಿಗಳನ್ನು ಮಾತ್ರ ಕೆಟಗರಿ 1 ಕ್ಕೆ ಸೇರಿಸಲಾಗಿದೆ. ಲಿಂಗಾಯತ, ಒಕ್ಕಲಿಗರಲ್ಲೂ ಬಡವರಿಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಇತರೆ ಲಿಂಗಾಯತ ಸಮುದಾಯದ ಸಚಿವರೂ ಧ್ವನಿಗೂಡಿಸಿದ್ದಾರೆ. ಈ ವರದಿಯೇ ಸರಿಯಿಲ್ಲ ಎಂದಿದ್ದಾರೆ. ಈ ಹಿಂದೆ ಲಿಂಗಾಯತ ಧರ್ಮ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದೇವೆ. ಮತ್ತೆ ಅಂತಹ ತಪ್ಪು ಮಾಡುವುದು ಬೇಡ ಎಂಬ ಸಲಹೆ ಬಂತು. ಇದಕ್ಕೆ ಸಚಿವ ಎಂಬಿ ಪಾಟೀಲ್ ಆಕ್ಷೇಪವೆತ್ತಿದರು. ಬಳಿಕ ಸಿಎಂ ಸಿದ್ದರಾಮಯ್ಯ ಎಲ್ಲರನ್ನೂ ಸಮಾಧಾನಪಡಿಸಿದರು.