Publish Date: Mon, 15 Jun 2026 (16:16 IST)
Updated Date: Mon, 15 Jun 2026 (16:19 IST)
ಬೆಂಗಳೂರು: ಪಾಪ.. ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಮಾಗಡಿ ಬಾಲಕೃಷ್ಣ ನನ್ನ ಬೈಕೊಂಡು, ಒಂಟಿ ಕಣ್ಣಲ್ಲಿ ನೀರು ಹಾಕಿಕೊಂಡು ಓಡಾಡ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕಸ ವಿಲೇವಾರಿ ಟೆಂಡರ್ ಅಕ್ರಮ ಆರೋಪ ಹೊರಿಸಿದ್ದ ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ್ದ ಮಾಗಡಿ ಬಾಲಕೃಷ್ಣ, ಅಶೋಕ್ ಯಾರ ಬಗ್ಗೆ ಮಾತನಾಡ್ತಿದ್ದಾರೆ? ಡಿಕೆ ಶಿವಕುಮಾರ್ ಗೆ ಗೌರವ ಕೊಟ್ಟು ಮಾತನಾಡುವುದು ಕಲಿಯಲಿ ಎಂದೆಲ್ಲಾ ಕಿಡಿ ಕಾರಿದ್ದರು.
ಅವರಿಗೆ ಈಗ ತಿರುಗೇಟು ಕೊಟ್ಟಿರುವ ಅಶೋಕ್ ಕಳೆದ ಮೂರು ವರ್ಷಗಳಿಂದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ವಕಾಲತ್ತು ವಹಿಸಿ, ಮಾಧ್ಯಮಗಳ ಮುಂದೆ ನಿರಂತರವಾಗಿ ಹೇಳಿಕೆ ಕೊಟ್ಟು, ಒಂಟಿ ಕಣ್ಣಲ್ಲಿ ಕಣ್ಣೀರು ಸುರಿಸುತ್ತಿದ್ದ ಮಾಗಡಿ ಶಾಸಕ ಬಾಲಕೃಷ್ಣ ಅವರು, ಈಗ ಮಂತ್ರಿ ಸ್ಥಾನ ಸಿಗದ ಹತಾಶೆಯಿಂದ ವಿರೋಧ ಪಕ್ಷದ ನಾಯಕರನ್ನು ನಿಂದಿಸಲು ಶುರು ಮಾಡಿದ್ದಾರೆ. ನನ್ನನ್ನು ಬೈದರೆ, ತೇಜೋವಧೆ ಮಾಡಿದರೆ ಮಂತ್ರಿ ಸ್ಥಾನ ಸಿಗಬಹುದು ಎನ್ನುವ ಆಸೆಯಿಂದ ತಮ್ಮ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.
ಮೂರು ವರ್ಷಗಳ ನಿರಂತರ ಅಚಲ ಸ್ವಾಮಿನಿಷ್ಠೆಗಾಗಿ ಅಲ್ಲದಿದ್ದರೂ, ಕನಿಷ್ಠ ನನ್ನನ್ನು ಬೈದಿದ್ದಕ್ಕಾದರೂ ಡಿ.ಕೆ.ಶಿವಕುಮಾರ್ ಅವರು ಬಾಲಕೃಷ್ಣ ಅವರಿಗೆ ಮಂತ್ರಿ ಸ್ಥಾನ ಕೊಡಿಸಲಿ ಎಂದು ಆಶಿಸುತ್ತೇನೆ. ಮಂತ್ರಿ ಸ್ಥಾನ ಸಿಕ್ಕಮೇಲಾದರೂ ಆ ಮಾಗಡಿ ರಂಗನಾಥ ಸ್ವಾಮಿ ಬಾಲಕೃಷ್ಣ ಅವರಿಗೆ ಸದ್ಬುದ್ಧಿ ಕೊಡಲಿ, ಆಚಾರವಿಲ್ಲದ ಅವರ ನಾಲಿಗೆಗೆ ಸ್ವಲ್ಪ ಸದಾಚಾರ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವ್ಯಂಗ್ಯ ಮಾಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ