Select Your Language

Notifications

webdunia
webdunia
webdunia
webdunia

ದೇವೇಗೌಡರ ಕುರಿತು ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ

BY Vijayendra
ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ದೇವೇಗೌಡರ ಕುರಿತು ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.

ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ದೇಶದ ಅತ್ಯುನ್ನತ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿ, ಹೆಮ್ಮೆಯ ಕನ್ನಡಿಗ ಎನಿಸಿಕೊಂಡಿದ್ದ ಸನ್ಮಾನ್ಯ ಎಚ್.ಡಿ. ದೇವೇಗೌಡರನ್ನು ಪ್ರಧಾನಿ ಪದವಿಯಿಂದ ಕೆಳಗಿಳಿಸಿದ ಕುಖ್ಯಾತಿ ಕಾಂಗ್ರೆಸ್ ಪಕ್ಷದ ಮೇಲಿರುವುದನ್ನು ಕಾಂಗ್ರೆಸ್ ಮುಂದಾಳುಗಳು ಮರೆತಂತಿದೆ. ಮಾನ್ಯ ದೇವೇಗೌಡರನ್ನು ರಾಜಕೀಯ ಜೀವನದುದ್ದಕ್ಕೂ ಕಾಡಿದ್ದು, ಅವರ ಪಕ್ಷವನ್ನು ಇಬ್ಬಾಗ ಮಾಡಲು ಯತ್ನಿಸಿದ್ದು ಕಾಂಗ್ರೆಸ್. ಇಷ್ಟಾಗಿಯೂ ಕೊಳಕು ರಾಜಕಾರಣ ಮಾಡುವುದನ್ನು ನಿಲ್ಲಿಸದ ಕಾಂಗ್ರೆಸ್ಸಿಗರು, ದೇವೇಗೌಡರ ಕುರಿತು ಕೃತಕ ಕಾಳಜಿಯ ಮಾತನಾಡುತ್ತಿರುವ ಪರಿ ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿಯು ಸನ್ಮಾನ್ಯ ದೇವೇಗೌಡ ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದೆ. ಭಾರತದ ಸಮಗ್ರತೆ ಉಳಿಯಬೇಕಾದರೆ, ಅಭಿವೃದ್ಧಿ ಹೊಂದಬೇಕಾದರೆ ಅದು ಪ್ರಧಾನಿ ನರೇಂದ್ರ ಮೋದಿಜೀ ಅವರ ಆಡಳಿತದಿಂದ ಮಾತ್ರ ಸಾಧ್ಯ ಎಂಬ ನಂಬಿಕೆಯಿಂದ ದೇವೇಗೌಡ ಅವರು ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸಿ, ಎನ್‍ಡಿಎಗೆ ತಮ್ಮ ಜೆಡಿಎಸ್ ಪಕ್ಷವನ್ನು ಸೇರಿಸಿದ್ದಾರೆ. ಇದನ್ನು ಕಂಡು ಸಹಿಸಲಾಗದ ಸ್ಥಿತಿಯಲ್ಲಿರುವ ಕಾಂಗ್ರೆಸ್ಸಿಗರು ದೇವೇಗೌಡರ ಹೆಸರನ್ನು ಬಳಸಿಕೊಂಡು ರಾಜಕಾರಣ ಮಾಡಲು ಹೊರಟಿರುವುದು ನಾಚಿಗೆಗೇಡಿತನದ ಪರಮಾವಧಿಯಾಗಿದೆ ಎಂದು ಆಕ್ಷೇಪಿಸಿದ್ದಾರೆ.

ಅವರ ಹಿರಿತನ, ಸೇವೆ ಉಲ್ಲೇಕಿಸಿ ಸಂಸತ್ತಿನಲ್ಲಿ ಸ್ವತಃ ಪ್ರಧಾನ ಮಂತ್ರಿಗಳೇ ಭಾವುಕವಾಗಿ ಮಾತನಾಡಿ ಅವರ ಕೊಡುಗೆ, ಸಾಧನೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ರಾಷ್ಟವನ್ನು ಮುನ್ನಡೆಸುವ ನಿಟ್ಟಿನಲ್ಲಿ ಅವರ ಮಾರ್ಗದರ್ಶನ ಸದಾ ನಮಗೆ ಬೇಕೆಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅತ್ಯುತ್ತಮ ರಾಜಕೀಯ ಹಾಗೂ ವ್ಯಕ್ತಿಗತ ಗೌರವಗಳ ಬಾಂಧವ್ಯವಿರುವ ದೇವೇಗೌಡರೊಂದಿಗಿನ ಸಂಬಂಧಕ್ಕೆ ಹುಳಿ ಹಿಂಡುವ ಮಾತುಗಳು ‘ಕಾಂಗ್ರೆಸ್ಸಿಗರ ವಿಕೃತ ನಡೆ‘ ಎನ್ನುವುದನ್ನು ಕರ್ನಾಟಕದ ಜನತೆ ಅರ್ಥೈಸಿಕೊಳ್ಳದಷ್ಟು ಮುಗ್ಧರಲ್ಲ ಎನ್ನುವ ತಿಳುವಳಿಕೆ ಕಾಂಗ್ರೆಸ್ಸಿಗರಿಗಿರಲಿ ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸೂರಜ್ ಹೆಗ್ಡೆ ಅಂತಿಮ ದರ್ಶನಕ್ಕೆ ಬಂದ ರಾಹುಲ್ ಗಾಂಧಿ