Publish Date: Thu, 11 Jun 2026 (13:42 IST)
Updated Date: Thu, 11 Jun 2026 (13:44 IST)
ಬೆಂಗಳೂರು: ಕಸ ಟೆಂಡರ್ ವಿಚಾರದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮವಾಗಿದೆ ಎಂದು ಆರೋಪಿಸಿದ್ದ ವಿಪಕ್ಷ ನಾಯಕ ಆರ್ ಅಶೋಕ್ ಕಸದ ಏಜೆಂಟ್ ಎಂದಿದ್ದ ಸಿಎಂ ಡಿಕೆ ಶಿವಕುಮಾರ್ ಗೆ ಅವರು ಈಗ ತಿರುಗೇಟು ನೀಡಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ಟೀಕೆಗೆ ತಿರುಗೇಟು ನೀಡಿರುವ ಆರ್ ಅಶೋಕ್ ಹೌದು, ನಾನು ಏಜೆಂಟ್ ಆಗಿಯೇ ಮಾತನಾಡುತ್ತಿದ್ದೇನೆ! ಆದರೆ ನಿಮ್ಮ ತರಹ ಯಾವುದೋ "ಮಾಫಿಯಾ" ಹಿತಾಸಕ್ತಿ ಕಾಯುವ ಕಮಿಷನ್ ಏಜೆಂಟ್ ಆಗಿ ಅಲ್ಲ. ಕರ್ನಾಟಕದ ಏಳೂವರೆ ಕೋಟಿ ಕನ್ನಡಿಗರ ಹಕ್ಕಿಗಾಗಿ, ಬೆಂಗಳೂರಿನ ಒಂದೂವರೆ ಕೋಟಿ ನಾಗರಿಕರ ಧ್ವನಿಯಾಗಿ ನಿಂತಿರುವ ಜನತಾ ಏಜೆಂಟ್ ನಾನು. ವಿಪಕ್ಷ ನಾಯಕನಾಗಿ ನಿಮ್ಮ ಲೂಟಿ-ದಂದೆಯನ್ನು ಪ್ರಶ್ನಿಸುವುದು ನನ್ನ ಸಂವಿಧಾನಬದ್ಧ ಕರ್ತವ್ಯ, ಅದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ.
ಹೈಕಮಾಂಡ್ ಬಾಗಿಲಲ್ಲಿ ಕಾಡಿ-ಬೇಡಿ, ಅತ್ತು-ಕರೆದು, ಕೊನೆಗೂ ಸಿಎಂ ಸೀಟು ಗಿಟ್ಟಿಸಿಕೊಂಡಿರುವ ತಮಗೆ ವಿಪಕ್ಷಗಳು ಕನಿಷ್ಠ 'ಹನಿಮೂನ್ ಪೀರಿಯಡ್' ಕೂಡ ಕೊಡ್ತಿಲ್ಲವಲ್ಲ ಅನ್ನೋ ಹತಾಶೆ, ಭಯ, ಆತಂಕ ನನಗೆ ಅರ್ಥವಾಗುತ್ತದೆ. ಆದರೆ ನಿಮ್ಮ ಸ್ವಂತ ಪಕ್ಷದ ಶಾಸಕರೇ ದಿನಬೆಳಗಾದರೆ ಮಾಧ್ಯಮಗಳ ಮುಂದೆ ನಿಮ್ಮ ವಿರುದ್ಧ ಅಸಮಾಧಾನದ ಜಾಗಟೆ ಬಾರಿಸುತ್ತಾ, ದೆಹಲಿಗೆ ದಂಡೆತ್ತಿ ಹೋಗುತ್ತಿರುವಾಗ ನಿಮಗೆ ಹನಿಮೂನ್ ಪೀರಿಯಡ್ ಎಲ್ಲಿಂದ ಸಿಗಬೇಕು ಡಿ.ಕೆ.ಶಿವಕುಮಾರ್ ಅವರೇ? ನಿಮ್ಮ ಮನೆಯಲ್ಲೇ ಬೆಂಕಿ ಉರಿಯುತ್ತಿರುವಾಗ ನನ್ನ ಮೇಲೆ ರಾಜಕೀಯ ಗೂಬೆ ಕೂರಿಸಬೇಡಿ.
"ನಮ್ಮ ಪಾರದರ್ಶಕತೆ, ಕಾರ್ಯವೈಖರಿ ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ" ಎಂಬ ನಿಮ್ಮ ಹೇಳಿಕೆ ಶತಮಾನದ ಅತಿ ದೊಡ್ಡ ಹಾಸ್ಯ! ನಿಮ್ಮ ಹಿನ್ನೆಲೆ ಏನು, ನಿಮ್ಮ 'ಆಡಳಿತ ವೈಖರಿ'ಯ ಅಸಲಿ ಚರಿತ್ರೆ ಏನು, ತಾವು ಕಟ್ಟಿಕೊಂಡಿರುವ "ಪಾರದರ್ಶಕ ಸಾಮ್ರಾಜ್ಯ" ಎಂಥದ್ದು ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತಿದೆ. ನಿಮ್ಮಿಂದ ಪಾರದರ್ಶಕತೆಯ ಪಾಠ ಕಲಿಯುವ ದೌರ್ಭಾಗ್ಯ ಕನ್ನಡಿಗರಿಗಿಲ್ಲ.
ಟೆಂಡರ್ ನಿಯಮಗಳ ಅಕ್ರಮವನ್ನು ಮುಚ್ಚಿಹಾಕಲು ನೀವೇ ಸ್ವತಃ ಉನ್ನತ ಮಟ್ಟದ ಸಮಿತಿ ರಚಿಸಿ, ವರದಿ ನೀಡಲು ಕೊಟ್ಟಿದ್ದ ಒಂದು ವಾರದ ಗಡುವು ಇಂದಿಗೆ ಮುಕ್ತಾಯವಾಗಿದೆ. ತಾಕತ್ತಿದ್ದರೆ, ನಿಮ್ಮಲ್ಲಿ ಕಿಂಚಿತ್ತಾದರೂ ಪಾರದರ್ಶಕತೆ ಉಳಿದಿದ್ದರೆ, ಆ ವರದಿಯನ್ನು ಅಡಗಿಸಿಡದೆ ತಕ್ಷಣ ಬಹಿರಂಗಪಡಿಸಿ! ವರದಿಯನ್ನು ಇಡೀ ರಾಜ್ಯದ ಜನರ ಮುಂದಿಡಿ. ನಿಮ್ಮ "ಅಸಲಿ ಮುಖವಾಡ" ಕಳಚಿ ಬೀಳಲಿ, ಯಾರ ಕಾರ್ಯವೈಖರಿ ಎಂಥದ್ದು ಅಂತ ಜನರೇ ತೀರ್ಮಾನಿಸಲಿ ಎಂದು ಸವಾಲು ಹಾಕಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ