ಬೆಂಗಳೂರು: ಜಾತಿಗಣತಿ, ದಸರಾ ಉದ್ಘಾಟನೆ ವಿವಾದದ ಬಳಿಕ ಈಗ ಕರ್ನಾಟಕದಲ್ಲಿರುವ ಹಿಂದೂ ದೇವಾಲಯಗಳ ಸೇವಾ ಶುಲ್ಕ ಹೆಚ್ಚಿಸಿರುವ ಸರ್ಕಾರದ ವಿರುದ್ಧ ಕಿಡಿ ಕಾರಿರುವ ವಿಪಕ್ಷ ನಾಯಕ ಆರ್ ಅಶೋಕ್ ಹಿಂದೂಳೇ ಟಾರ್ಗೆಟ್, ರಾಹುಲ್ ಗಾಂಧಿ ಲೆಕ್ಕದಲ್ಲಿ ಹಿಂದೂಗಳು ಎರಡನೆಯ ದರ್ಜೆಯವರಾ ಎಂದು ಪ್ರಶ್ನಿಸಿದ್ದಾರೆ.
ದೇವಾಲಯಗಳ ಸೇವಾ ಶುಲ್ಕ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಏರಿಕೆ ಮಾಡಲಾಗಿದೆ. ಇದರ ಬಗ್ಗೆ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮಗೆ ಹಿಂದೂಗಳಿಗೆ ಕಿರುಕುಳ ಕೊಡುವುದರಲ್ಲಿ ಏನು ಸಂತೋಷ ಸಿಗುತ್ತದೆ ಎಂದಿದ್ದಾರೆ.
ಹಿಂದೂಗಳ ದೇವಸ್ಥಾನ, ಹಬ್ಬ, ಆಚರಣೆಗಳಿಗೆ ಅಡಚಣೆ ಉಂಟು ಮಾಡುವುದರಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅದೆಂತಹ ವಿಕೃತ ಸಂತೋಷ ಸಿಗುತ್ತೋ ಗೊತ್ತಿಲ್ಲ.
ತಾಯಿ ಚಾಮುಂಡೇಶ್ವರಿ, ತಾಯಿ ಭುವನೇಶ್ವರಿ, ನಮ್ಮ ಸಂಸ್ಕೃತಿಯ ಪ್ರತೀಕವಾದ ಹರಿಷಿಣ, ಕುಂಕುಮದ ಮೇಲೆ ನಂಬಿಕೆ ಇಲ್ಲದ ಅನ್ಯಧರ್ಮೀಯರಿಂದ ದಸರಾ ಉದ್ಘಾಟನೆ ಮಾಡಿಸುವ ಹಠ ಸಾಧಿಸಿದ್ದಾಯಿತು.
ದುಬಾರಿ ಪಾಸ್ ನೆಪದಲ್ಲಿ ಜನಸಾಮಾನ್ಯರಿಗೆ ದಸರಾ ವೀಕ್ಷಣೆ ಕಷ್ಟಸಾಧ್ಯ ಮಾಡಿದ್ದಾಯ್ತು. ಈಗ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ 14 ಪ್ರಮುಖ ಮುಜರಾಯಿ ದೇವಸ್ಥಾನಗಳಲ್ಲಿ ಸೇವಾ ಶುಲ್ಕ ಏರಿಕೆ ಮಾಡುವ ಮೂಲಕ ಹಿಂದೂಗಳಿಗೆ ಮತ್ತೊಂದು ಪೆಟ್ಟು ನೀಡಿದ್ದಾರೆ.
ಹಿಂದೂಗಳೆಂದರೆ ತಮಗೆ ಯಾಕಿಷ್ಟು ದ್ವೇಷ, ತಾತ್ಸಾರ ಸಿದ್ದರಾಮಯ್ಯನವರೇ? ರಾಹುಲ್ ಗಾಂಧಿ ಅವರ ಸಂವಿಧಾನ ಪುಸ್ತಕದಲ್ಲಿ ಹಿಂದೂಗಳು ಎರಡನೇ ದರ್ಜೆ ಪ್ರಜೆಗಳಾ? ಎಂದು ಕಿಡಿ ಕಾರಿದ್ದಾರೆ.