ಬೆಂಗಳೂರು: ಮಳೆ ಕೊರತೆಯಿಂದ ಜಲಾಶಯಗಳು ಖಾಲಿ ಖಾಲಿ ಎಂಬ ಪತ್ರಿಕಾ ವರದಿಯನ್ನು ಪ್ರದರ್ಶಿಸಿ, ಕಾಂಗ್ರೆಸ್‍ನವರಿಗೆ ಕಣ್ಣು ಕಾಣಿಸುವುದಿಲ್ಲ; ಕಣ್ಣು ಕುರುಡಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕಿಸಿದರು.
ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರ ಹೋಟೆಲ್ ಜಿ.ಎಂ. ರಿಜಾಯ್ಸ್‍ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮದವರೂ ವಿಪಕ್ಷ ಇದ್ದಂತೆ ಎಂದು ವಿವರಿಸಿದರು. 508 ಕೆರೆಯಲ್ಲಿ ಹನಿ ನೀರಿಲ್ಲ ಎಂಬ ಇನ್ನೊಂದು ಪತ್ರಿಕಾ ವರದಿ ಮುಂದಿಟ್ಟು, ಕಾಂಗ್ರೆಸ್ ಪಕ್ಷಕ್ಕೆ ಮಾನ ಮರ್ಯಾದೆ ಇದೆಯೇ? ಬರ ಘೋಷಿಸಲು ಏನು ಧಾಡಿ? ಯಾಕೆ ಮಾಡಿಲ್ಲ? ಅಮಿತ್ ಶಾ ಅವರು ಹೇಳಿದ್ದರಲ್ಲಿ ತಪ್ಪೇನಿದೆ? ನೀವು ಜುಲೈನಲ್ಲೇ ಘೋಷಿಸಿದ್ದರೆ ಕೇಂದ್ರದ ತಂಡ ಬರುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ನೀವು ವರದಿ ವಿಳಂಬ ಮಾಡಿ ಈಗ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಿಲ್ಲ ಎನ್ನುತ್ತೀರಲ್ಲವೇ ಎಂದು ಸರಕಾರವನ್ನು ಪ್ರಶ್ನಿಸಿದರು. ನಿಮಗೆ ನಾಚಿಕೆ ಆಗುವುದಿಲ್ಲವೇ? ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷ ಸತ್ತು ಹೋಗಿದೆಯೇ? ಗೌರವಾನ್ವಿತ ಖರ್ಗೆಜೀ ಅವರು ಯಾಕೆ ಪ್ರಶ್ನೆ ಮಾಡಿಲ್ಲ. ಅವತ್ತು ಯಾಕೆ ಚರ್ಚೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್‍ನಲ್ಲಿ ಕರ್ನಾಟಕ್ಕೆ ಇಷ್ಟು ಹಣ ಬರಬೇಕಿತ್ತು. ನೀವ್ಯಾಕೆ ಅದನ್ನು ಬಿಹಾರಕ್ಕೆ, ರಾಜಸ್ಥಾನಕ್ಕೆ ಕೊಟ್ಟಿದ್ದೀರಿ ಎಂದು ಕೇಳಬೇಕಿತ್ತು. ಕಾಂಗ್ರೆಸ್ ನಾಯಕರಿಗೆ ಕೆಪ್ಯಾಸಿಟಿ ಇಲ್ಲ. ಮಾತನಾಡುವ ಸಾಮಥ್ರ್ಯ, ಶಕ್ತಿ ಇಲ್ಲ. ಅದಕ್ಕಾಗಿ ನಿರ್ಮಲಾ ಸೀತಾರಾಮನ್ ಅವರು ಬಂದು ಕೈಕಟ್ಟಿ ನಿಂತು ಇವರ ಪ್ರಶ್ನೆಗೆ ಉತ್ತರ ಹೇಳಬೇಕಂತೆ ಎಂದು ವ್ಯಂಗ್ಯವಾಡಿದರು. ಕೃಷ್ಣಬೈರೇಗೌಡರಿಗೆ ಅಷ್ಟು ಟ್ಯಾಲೆಂಟ್ ಇದ್ದರೆ ಸಂಸತ್ತಿಗೆ ಹೋಗಬೇಕಿತ್ತಲ್ಲವೇ ಎಂದು ಕೇಳಿದರು.
ಸಚಿವರಿಗೆ ಸ್ಪರ್ಧೆ ಮಾಡಲು ಭಯ. ಓಡು ಮಗ ಓಡು ಮಗ ಎಂದು ಓಡುತ್ತಿದ್ದಾರೆ. ಈಗ ಭಯದಿಂದ 10 ಜನ ಮಕ್ಕಳನ್ನು ಕಣಕ್ಕೆ ಇಳಿಸಿದ್ದಾರೆ. ಬರ ನಿರ್ವಹಣೆಯಲ್ಲಿ ರಾಜ್ಯದ ಜನಕ್ಕೆ ಮೋಸ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಬಂದಾಗ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಹಲವಾರು ಟ್ವೀಟ್ ಮಾಡಿದ್ದರು. ಅಮಿತ್ ಶಾ ಅವರು ಭಾಷಣ ಮಾಡುವ ವೇಳೆ ಈ ರಾಜ್ಯ ಸರಕಾರವು ಬರಗಾಲದÀ ನಿರ್ವಹಣೆಯಲ್ಲಿ ವೈಫಲ್ಯ ಕಂಡಿದೆ; ಕರ್ನಾಟಕದ ಜನತೆಗೆ ಮೋಸ ಮಾಡಿದೆ. ವಂಚನೆ ಮಾಡಿದೆ. ಬರಗಾಲ ಘೋಷಣೆಗೆ 3 ತಿಂಗಳಿಗೂ ಹೆಚ್ಚು ಕಾಲ ಅಂದರೆ, 100 ದಿನ ವಿಳಂಬ ಮಾಡಿದ್ದಾಗಿ ಹೇಳಿದ್ದರು. ಅದಕ್ಕೆ ಸವಾಲು ಹಾಕಿದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವುದಾಗಿ ಹೇಳಿದ್ದರು ಎಂದು ವಿವರಿಸಿದರು.
ಮುಖ್ಯಮಂತ್ರಿಗಳು ಬರಗಾಲ ಬಂದಾಗ ನಡೆದುಕೊಂಡ ರೀತಿಯ ಕುರಿತು ಪ್ರಸ್ತಾಪಿಸಿದ ಅವರು, ಜುಲೈನಲ್ಲೇ ಬರಗಾಲದ ಛಾಯೆ ಇದ್ದುದನ್ನು ಪತ್ರಿಕೆಗಳು ಬರೆದಿದ್ದವು ಎಂದು ತಿಳಿಸಿದರು. ವಾಡಿಕೆಗಿಂತ ಶೇ 67 ಮಳೆ ಪ್ರಮಾಣ ಕಡಿಮೆ ಇದ್ದುದನ್ನೂ ಗಮನಕ್ಕೆ ತಂದರು. ಸೆಪ್ಟೆಂಬರ್- ಅಕ್ಟೋಬರ್‍ನಲ್ಲಿ ನೀವು ಘೋಷಣೆ ಮಾಡಿದ್ದಲ್ಲವೇ ಎಂದು ಪ್ರಶ್ನಿಸಿದರು. ಹಾಗಿದ್ದರೆ ನೀವು ಮೂರು ತಿಂಗಳ ಬಳಿಕ ಘೋಷಣೆ ಮಾಡಿದ್ದೀರಲ್ಲವೇ ಎಂದೂ ಕೇಳಿದರು.
ರಾಜ್ಯದಲ್ಲಿ 145 ಮಿಮೀ ವಾಡಿಕೆ ಮಳೆ ಬದಲಾಗಿ 48 ಮಿಮೀ ಮಳೆ ಬಂದಿತ್ತು ಎಂದು ತಿಳಿಸಿದರು. ಮಲೆನಾಡಿನಲ್ಲಿ 250 ಮಿಮೀ ಮಳೆ ಬರಬೇಕಿದ್ದು, 52 ಮಿಮೀ ಬಂದಿತ್ತು ಎಂದು ಪತ್ರಿಕೆಯವರು ಸರಕಾರದ ಕಣ್ಣು ತೆರೆಸುವ ಯತ್ನ ಮಾಡಿದ್ದರು. ಕಾಮಾಲೆ ಕಣ್ಣಿಗೆ ಕಾಣುವಂತೆ ಮುದ್ರಣ- ಇಲೆಕ್ಟ್ರಾನಿಕ್ ಮಾಧ್ಯಮಗಳು ವರದಿ ಮಾಡಿದ್ದವು. ರೈತರು ತಲೆ ಮೇಲೆ ಕೈಹೊತ್ತು ಕುಳಿತ ಫೋಟೊ ಹಾಕಿದ್ದರು ಎಂದು ಪತ್ರಿಕಾ ವರದಿಗಳನ್ನು ಪ್ರದರ್ಶಿಸಿದರು.