ಬೆಂಗಳೂರು: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ದೂರಿದ್ದಾರೆ. ಇದಕ್ಕೆ ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದು ಕಳ್ಳನಿಗೊಂದು ಪಿಳ್ಳೆ ನೆವ ಎಂದಿದ್ದಾರೆ.
ರೈತರ ಉತ್ಪನ್ನಕ್ಕೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್.ಆರ್.ಪಿ) ನಿರ್ಧರಿಸಿರುವುದು ಕೇಂದ್ರದ ಬಿಜೆಪಿ ಸರ್ಕಾರ. ರೈತರು ಯಾವುದೇ ಕಾರಣಕ್ಕೂ ರೈತ ದ್ರೋಹಿಯಾದ ರಾಜ್ಯದ ಬಿಜೆಪಿ ನಾಯಕರ ಮಾತುಗಳಿಗೆ ಮರುಳಾಗಬಾರದು. ಅವರು ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ, ಎಚ್ಚರವಾಗಿರಿ.
ಕೇಂದ್ರ ಸರ್ಕಾರವು ರಾಜ್ಯದ ವಿಚಾರದಲ್ಲಿ ತೋರುತ್ತಿರುವ ಮಲತಾಯಿ ಧೋರಣೆಯು ರೈತರ ಅನ್ನದ ತಟ್ಟೆಯವರೆಗೂ, ರೈತರ ಭೂಮಿಯವರೆಗೂ ಬಂದಿದೆ. ಈ ವಿಚಾರದಲ್ಲಿ ನಾವು ಅಧಿಕಾರಕ್ಕೆ ಬಂದಾಗಿನಿಂದ ಧ್ವನಿ ಎತ್ತುತ್ತಿದ್ದೇವೆ. ಹಾಗಾಗಿ ನಮ್ಮ ಎಲ್ಲಾ ಪ್ರಯತ್ನಗಳ ಜೊತೆಯಲ್ಲಿ ತಾವೂ ಜೊತೆಗೂಡಬೇಕೆಂದು ಮನವಿ ಮಾಡುತ್ತೇನೆ. ಎಷ್ಟು ಬಿಕ್ಕಟ್ಟುಗಳು ಬಂದರೂ ನಮ್ಮ ಸರ್ಕಾರವು ರೈತ ಪರವಾಗಿದೆ ಎಂಬುದನ್ನು ಸಹ ತಮ್ಮ ಗಮನಕ್ಕೆ ತರಬಯಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಸಿಎಂ ತಮ್ಮ ಸಾಮಾಜಿಕ ಜಾಲತಾಣದಲ್ಲಿಹಂಚಿಕೊಂಡಿದ್ದು ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಎಲ್ಲದಕ್ಕೂ ಕೇಂದ್ರವೇ ಕಾರಣ ಎಂದಾದರೆ ರಾಜ್ಯದಲ್ಲಿ ನೀವು ಅಧಿಕಾರದಲ್ಲಿ ಇರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಇದು ಒಂದು ರೀತಿಯಲ್ಲಿ ಕಳ್ಳನಿಗೊಂದು ಪಿಳ್ಳೆ ನೆವ ಇದ್ದಂತೆ ಎಂದಿದ್ದಾರೆ.
ಮತ್ತೊಬ್ಬ ಬಳಕೆದಾರರು ರಾಜಕಾರಣಿಗಳ ಮಾತಿಗೆ ಮರುಳಾಗುವಷ್ಟು ರೈತರು ಮೂರ್ಖರಲ್ಲ. ಕೇಂದ್ರ ಸರ್ಕಾರ 2024-25 ನೇ ಸಾಲಿಗಿಂತ ಈ ವರ್ಷ ಶೇ.4.41 ರಷ್ಟು ಹೆಚ್ಚಿಸಿದೆ. ಅದರ ಲೆಕ್ಕದ ಪ್ರಕಾರ ಪ್ರತೀ ಟನ್ ಕಬ್ಬಿಗೆ 150 ರೂ. ಹೆಚ್ಚಿಸಬೇಕಾಗಿತ್ತು. ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜ್ಯಗಳು ಅದರ ಮೇಲೆ ಎಸ್ಎಪಿ ಘೋಷಣೆ ಮಾಡಿ ರೈತರಿಗೆ ಅನುಕೂಲ ಆಗಲಿ ಅಂತ 3550-3700 ರೂಪಾಯಿ ಕೊಡುತ್ತಿದೆ. ಅದರಂತೆ ತಾವು ಸಹ ಎಸ್ಎಪಿ ಜಾರಿ ಮಾಡಿ ಎಂದು ಆಗ್ರಹಿಸಿದ್ದಾರೆ.