Select Your Language

Notifications

webdunia
webdunia
webdunia
webdunia

ಸತತ ಎರಡು ದಿನ ರಾಜ್ಯದಲ್ಲಿ ರಾಹುಲ್ ಗಾಂಧಿ ಪ್ರತಿಕೃತಿ ದಹನ ಮಾಡಲು ಸಜ್ಜಾದ ಬಿಜೆಪಿ

N Ravikumar

Krishnaveni K

ಬೆಂಗಳೂರು , ಬುಧವಾರ, 11 ಸೆಪ್ಟಂಬರ್ 2024 (15:41 IST)
ಬೆಂಗಳೂರು: ಮೀಸಲಾತಿ ರದ್ದುಪಡಿಸುವುದಾಗಿ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಅಮೆರಿಕದಲ್ಲಿ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ. ಇದನ್ನು ಖಂಡಿಸಿ ಇವತ್ತಿನಿಂದ ಎರಡು ದಿನಗಳ ಕಾಲ ರಾಹುಲ್ ಗಾಂಧಿಯವರ ಪ್ರತಿಕೃತಿ ದಹನ ಮಾಡಲಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಪ್ರಕಟಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎಸ್‍ಸಿ, ಎಸ್‍ಟಿಗಳಿಗೆ ಗೌರವ ಕೊಡಬೇಕು; ಅವರಿಗೆ ರಕ್ಷಣೆ ಕೊಡಬೇಕೆಂಬ ದೃಷ್ಟಿಯಿಂದ ನಾವು ರಾಜ್ಯಾದ್ಯಂತ ನಾಳೆ, ನಾಡಿದ್ದು ರಾಹುಲ್ ಗಾಂಧಿಯವರ ಪ್ರತಿಕೃತಿ ದಹನ ಮಾಡುತ್ತೇವೆ ಎಂದು ತಿಳಿಸಿದರು.

ರಾಹುಲ್ ಗಾಂಧಿಯವರು ಮೀಸಲಾತಿ ನಿಲ್ಲಿಸುವುದಾಗಿ ಹೇಳಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಎರಡು ಸಾರಿ ಚುನಾವಣೆಯಲ್ಲಿ ಸೋಲಿಸಿದ ಪಕ್ಷ ಕಾಂಗ್ರೆಸ್. ಸಂವಿಧಾನವನ್ನು ಬರೆದ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಅವತ್ತು ಅಪಮಾನ ಮಾಡಲಾಗಿತ್ತು. ಈಗ ಮೀಸಲಾತಿ ರದ್ದುಪಡಿಸುವುದಾಗಿ ಹೇಳಿ ಅವರ ವಿಚಾರಕ್ಕೇ ತಿಲಾಂಜಲಿ ನೀಡಲು ಹೊರಟಿದ್ದಾರೆ ಎಂದು ಟೀಕಿಸಿದರು.

ದಲಿತರ ಬದುಕಿಗೆ, ಎಸ್‍ಸಿ, ಎಸ್‍ಟಿಗಳ ಮೀಸಲಾತಿಗೆ ಕೊಡಲಿಪೆಟ್ಟು ಹಾಕುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಇದೇನಾ ನೀವು ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ನೀಡುವ ಗೌರವ ಎಂದು ಪ್ರಶ್ನಿಸಿದರು. ಇದೇನಾ ನೀವು ಸಂವಿಧಾನಕ್ಕೆ ಕೊಡುವ ಮರ್ಯಾದೆ ಎಂದು ಕೇಳಿದರು.
 
ಮೀಸಲಾತಿ ಎಂಬುದು ಕಾಂಗ್ರೆಸ್ ಪಾರ್ಟಿಯ ಭಿಕ್ಷೆಯಲ್ಲ
ನಮ್ಮ ದೇಶದಲ್ಲಿ ಮೀಸಲಾತಿ ಎಂಬುದು ಎಸ್‍ಸಿ, ಎಸ್‍ಟಿಗಳ ಬರ್ತ್ ರೈಟ್. ಮೀಸಲಾತಿ ಪಡೆಯುವುದು ಅವರ ಹಕ್ಕು. ಅದು ಕಾಂಗ್ರೆಸ್ ಪಾರ್ಟಿಯ ಭಿಕ್ಷೆಯಲ್ಲ. ದಲಿತರ ಕಲ್ಯಾಣಕ್ಕಾಗಿ, ಬದುಕಿಗೆ ರಕ್ಷಣೆ, ಜೀವನಕ್ಕೆ ಭದ್ರತೆ ನೀಡಲು ಮತ್ತು ಅವರು ಮನುಷ್ಯರ ರೀತಿ ಅವರು ಬದುಕಬೇಕೆಂಬ ಹಿನ್ನೆಲೆಯಲ್ಲಿ ಡಾ. ಅಂಬೇಡ್ಕರ್ ಅವರು ಮೀಸಲಾತಿಯನ್ನು ಸಂವಿಧಾನದಲ್ಲೇ ಬರೆದರು ಎಂದು ಎನ್.ರವಿಕುಮಾರ್ ಅವರು ವಿಶ್ಲೇಷಿಸಿದರು.

1955ರಲ್ಲಿ ಕಾಕಾ ಕಾಲೇಕರ್ ಸಮಿತಿ ವರದಿ ನೀಡುವ ಸಂದರ್ಭದಲ್ಲಿ ನೆಹರೂ ಅವರು ಮೀಸಲಾತಿಯನ್ನು ವಿರೋಧಿಸಿದ್ದರು. ಅಂದರೆ ನೆಹರೂ ಅವರು ಕೂಡ ಸಂವಿಧಾನದಲ್ಲಿದ್ದ ಮೀಸಲಾತಿಯನ್ನು ವಿರೋಧಿಸಿದ್ದರು ಎಂದು ಆಕ್ಷೇಪಿಸಿದರು.
 
ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಎಸ್‍ಸಿ, ಎಸ್‍ಟಿಗಳ 25 ಸಾವಿರ ಕೋಟಿ ಹಣವನ್ನು ಬೇರೆಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಇದು ಕೂಡ ಎಸ್‍ಸಿ, ಎಸ್‍ಟಿಗಳಿಗೆ ಮಾಡಿದ ಘೋರ ಅಪಮಾನ ಎಂದು ಖಂಡಿಸಿದರು. ಎಸ್‍ಟಿಗಳ ಅಭಿವೃದ್ಧಿಗಾಗಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಇದ್ದ ಹಣವನ್ನು ಬಳ್ಳಾರಿ ಚುನಾವಣೆಗೆ ಬಳಸಿದ್ದಾರೆ. 187 ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮೀಸಲಾತಿ ಕೊಡಬಾರದು ಎಂಬ ಚಿಂತನೆ ಕಾಂಗ್ರೆಸ್ಸಿಗರ ರಕ್ತದಲ್ಲೇ ಇದೆ ಎಂದು ಅವರು ಟೀಕಿಸಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಮೀಸಲಾತಿ ಖತಂ ಮಾಡುತ್ತೇವೆ; ನಿಲ್ಲಿಸುತ್ತೇವೆ ಎಂದು ರಾಹುಲ್ ಗಾಂಧಿಯವರು ತಮ್ಮ ಮನದಾಳದ ಇಂಗಿತವನ್ನು ಹೇಳಿದ್ದಾರೆ. ಮೀಸಲಾತಿ ಬಗ್ಗೆ ರಾಹುಲ್ ಗಾಂಧಿಯವರಿಗೆ ಇರುವ ಆಕ್ರೋಶ, ಅಭಿಪ್ರಾಯವು ಅವರ ಅಮೆರಿಕದ ಭಾಷಣದಲ್ಲಿ ವ್ಯಕ್ತವಾಗಿದೆ ಎಂದು ವಿವರಿಸಿದರು.
 
ಸಂವಿಧಾನಕ್ಕೆ 106 ತಿದ್ದುಪಡಿ ಮೂಲಕ ಡಾ.ಅಂಬೇಡ್ಕರರಿಗೆ ಅವಮಾನ
1990ರ ಸೆಪ್ಟೆಂಬರ್ 6ರಂದು ರಾಜೀವ್ ಗಾಂಧಿಯವರು ಮಂಡಲ್ ಕಮಿಷನ್ ವರದಿಯನ್ನು ಮತ್ತು ಮೀಸಲಾತಿಯನ್ನು ವಿರೋಧಿಸಿದ್ದರು. ಮೀಸಲಾತಿಯನ್ನು ನೆಹರೂ, ರಾಜೀವ್ ಗಾಂಧಿಯವರು ವಿರೋಧಿಸಿದ್ದರು ಎಂದು ಗಮನ ಸೆಳೆದರು. ಸಂವಿಧಾನದಲ್ಲಿ ಮೀಸಲಾತಿ ನೀಡಿದ್ದು ಕಾಂಗ್ರೆಸ್ಸಿಗರಿಗೆ ಇಷ್ಟ ಇಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಸಂವಿಧಾನಕ್ಕೆ ಒಂದಲ್ಲ; ಎರಡಲ್ಲ, 106 ತಿದ್ದುಪಡಿಗಳನ್ನು ತಂದಿತ್ತು ಎಂದು ಟೀಕಿಸಿದರು. ಕಾಂಗ್ರೆಸ್ಸಿಗರು ನಿರಂತರವಾಗಿ ಸಂವಿಧಾನಕ್ಕೆ ಅವಮಾನ ಮಾಡಿದವರು, ಅಗೌರವ ತೋರಿದವರು ಎಂದು ರವಿಕುಮಾರ್ ಅವರು ದೂರಿದರು.
 
ಒಂದು ಸಮಯ ಬಂದರೆ, ಭಾರತದಲ್ಲಿ ಎಲ್ಲರಿಗೂ ಸಮಾನತೆ ಬರಲು ಮೀಸಲಾತಿ ನಿಲ್ಲಿಸಬೇಕಾಗುತ್ತದೆ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾಗಿ ಆಕ್ರೋಶ ಹೊರಹಾಕಿದರು. ಸಂಸತ್ತಿನ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸಂವಿಧಾನವನ್ನು ಕೈಯಲ್ಲಿ ಹಿಡಿದು ಎಲ್ಲರಿಗೂ ತೋರಿಸುತ್ತ ನಾವು ಸಂವಿಧಾನವನ್ನು ರಕ್ಷಿಸುತ್ತೇವೆ, ಸಂವಿಧಾನವನ್ನು ಉಳಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅದೇ ಸಂವಿಧಾನದಲ್ಲಿ ಮೀಸಲಾತಿ ಕುರಿತು ತಿಳಿಸಿದೆ. ಅಂಥ ಸಂವಿಧಾನಕ್ಕೆ ರಾಹುಲ್ ಗಾಂಧಿ ಅಪಮಾನ ಮಾಡಿದ್ದಾರೆ ಎಂದರು.

ಇದೇನಾ ನಿಮ್ಮ ಸಂವಿಧಾನ ರಕ್ಷಣೆ ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯನವರು ಉತ್ತರ ಕೊಡಲಿ ಎಂದು ಆಗ್ರಹಿಸಿದರು.
 
 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ: ಸಚಿವ ದಿನೇಶ್‌ ಗುಂಡೂರಾವ್