ಬೆಂಗಳೂರು: ಸೌಗತ್ ಇ ಮೋದಿ ಹೆಸರಿನಲ್ಲಿ ಮುಸ್ಲಿಮರಿಗೆ ಬಿಜೆಪಿಯವರು ಗಿಫ್ಟ್ ಕೊಟ್ಟರೆ ಓಲೈಕೆ ಎನಿಸಿಕೊಳ್ಳಲ್ವಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಈಗ ದೇಶದ ಬಡ ಮುಸ್ಲಿಂ ಕುಟುಂಬಕ್ಕೆ ಈದ್ ಹಬ್ಬ ಆಚರಿಸಲು ಸೌಗತ್ ಇ ಮೋದಿ ಎಂಬ ಹೆಸರಿನಲ್ಲಿ ಗಿಫ್ಟ್ ಪ್ಯಾಕೆಟ್ ಕೊಡಲು ಮುಂದಾಗಿದ್ದಾರೆ. ಈ ಗಿಫ್ಟ್ ಪ್ಯಾಕೆಟ್ ನಲ್ಲಿ ಈದ್ ಹಬ್ಬ ಆಚರಿಸಲು ಬೇಕಾದ ಎಲ್ಲಾ ವಸ್ತುಗಳೂ ಇರಲಿವೆ.
ಇದರ ಬಗ್ಗೆ ಈಗ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿರುವುದನ್ನು ಬಿಜೆಪಿ ಮುಸ್ಲಿಂ ಓಲೈಕೆ ಎಂದಿತ್ತು. ಕಾಂಗ್ರೆಸ್ ಮುಸ್ಲಿಮರನ್ನು ಓಲೈಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದೆ ಎಂದಿತ್ತು.
ಈಗ ಬಿಜೆಪಿಯೇ ಮುಸ್ಲಿಮರಿಗೆ ಗಿಫ್ಟ್ ನೀಡಲು ಮುಂದಾಗಿರುವುದನ್ನು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಸ್ಲಿಮರನ್ನು ಒಬಿಸಿ ವರ್ಗಕ್ಕೆ ಸೇರಿಸಿದ್ದಾರೆ. ನಾಲ್ಕು ಕಮಿಷನ್ ಗಳು ಮುಸ್ಲಿಮರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ತರಲು ಮೀಸಲಾತಿ ನೀಡಬೇಕು ಎಂದಿದ್ದಾರೆ. ಈ ಕಮಿಷನ್ ಮುಖ್ಯಸ್ಥರೆಲ್ಲಾ ಮುಸ್ಲಿಮರಾಗಿದ್ದರಾ? ಬಿಜೆಪಿಯವರಿಗೆ ಕಾಮನ್ ಸೆನ್ಸ್ ಇದೆಯಾ ಎಂದು ಖರ್ಗೆ ಪ್ರಶ್ನಿಸಿದ್ದಾರೆ.