ಹುಬ್ಬಳ್ಳಿ: ಕಾಂಗ್ರೆಸ್ ಎಂದರೆ ಕಳ್ಳರ ಪಾರ್ಟಿ. ಹಾಲಿನ ದರ ಏರಿಕೆ ಮಾಡಿದರೂ ಅದು ರೈತರಿಗೆ ಸಿಗುತ್ತದೆ ಎನ್ನುವುದಕ್ಕೆ ಯಾವುದೇ ಖಾತ್ರಿಯಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಂದಿನಿ ಹಾಲಿನ ದರ ಏರಿಕೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ಯಾಕೆ ನಂದಿನಿ ಹಾಲಿನ ದರ ಏರಿಕೆ ಮಾಡಿದ್ದರು? ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರೈತರಿಗೆ ಪ್ರೋತ್ಸಾಹ ಧನ ಕೊಟ್ಟಿಲ್ಲ ಎಂದು ಅವರು ಟೀಕಿಸಿದ್ದಾರೆ.
ಹಾಲಿನ ದರ ಹೆಚ್ಚಳ ಮಾಡಿದರೂ ರೈತರಿಗೆ ಕೊಡುವುದು ಅನುಮಾನ. ನಾನು ಭವಿಷ್ಯ ಹೇಳುತ್ತೇನೆ. ಈ ನಾಟಕವೆಲ್ಲಾ ಎರಡು ತಿಂಗಳು ಮಾತ್ರ. ಮತ್ತೆ ಎಲ್ಲವೂ ಬಂದ್ ಆಗುತ್ತದೆ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ದರ ಏರಿಕೆ ಮಾಡಲು ರೈತರು ಒಂದು ನೆಪ ಅಷ್ಟೇ ಎಂದಿದ್ದಾರೆ.
ಇನ್ನು, ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ರೇಸ್ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ಹಿಂದೆ ಸೀಮೆ ಎಣ್ಣೆ, ಹಾಲಿನ ಡೈರಿ ಮುಂದೆ ಜನ ಕ್ಯೂ ನಿಲ್ಲುತ್ತಿದ್ದರು. ಅದೇ ರೀತಿ ಈಗ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಕ್ಯೂ ನಿಂತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಒಂದೊಂದೇ ಹಗರಣಗಳಿಂದಾಗಿ ಆಡಳಿತ ವ್ಯವಸ್ಥೆ ಕುಸಿಯುತ್ತಿದೆ. ಇದೀಗ ಕೆಎಂಎಫ್ ಗತಿಯೂ ಅದೇ ಆಗಲಿದೆ ಎಂದರು.