Select Your Language

Notifications

webdunia
webdunia
webdunia
webdunia

ಮುಸಲ್ಮಾರನ್ನು ದಾರಿ ತಪ್ಪಿಸುವ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ ಆರೋಪ

Chalavadi Narayanaswamy

Krishnaveni K

ಬೆಂಗಳೂರು , ಗುರುವಾರ, 5 ಸೆಪ್ಟಂಬರ್ 2024 (14:28 IST)
ಬೆಂಗಳೂರು: ಬಿಜೆಪಿಯು ದೇಶದ ಹಿತರಕ್ಷಣೆಗೆ ಆದ್ಯತೆ ಕೊಟ್ಟಿದೆ. ಅಧಿಕಾರ ಗಳಿಕೆ ಮುಖ್ಯವಲ್ಲ. ಇದನ್ನು ಅರಿತುಕೊಂಡರೆ ಎಲ್ಲವೂ ಸರಿಹೋಗಲಿದೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರನ್ನು ಅದರಲ್ಲೂ ವಿಶೇಷವಾಗಿ ಮುಸಲ್ಮಾನ ಬಂಧುಗಳನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು. ನಾವು ಮುಸಲ್ಮಾನರ ಪರ ಎನ್ನುವ ಕಾಂಗ್ರೆಸ್ ಪಕ್ಷ ಎಷ್ಟು ಮುಸಲ್ಮಾನ ಮುಖ್ಯಮಂತ್ರಿಗಳನ್ನು ಮಾಡಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಒಬ್ಬ ಮುಸಲ್ಮಾನರನ್ನಾದರೂ ಅಧ್ಯಕ್ಷರನ್ನಾಗಿ ಮಾಡಿದ್ದಾರಾ? ಅವರ ಪರಿಸ್ಥಿತಿ ಗಮನಿಸಿದ್ದಾರಾ? ಅವರ ಕಾಲೊನಿಗಳಿಗೆ ಹೋಗಿದ್ದಾರಾ? ಎಂದು ಕೇಳಿದರು. ಜೋಕರ್‍ಗಳ ಥರ ಇಬ್ಬರನ್ನು ಮುಂದೆ ಇಟ್ಟು ಬಿಡುತ್ತಾರೆ. ಅವರಿಗೆ ಅಧಿಕಾರ ಕೊಡುತ್ತಾರೆ. ಅವರು ಇಡೀ ಸಮುದಾಯವನ್ನು ಗುತ್ತಿಗೆ ಪಡೆದವರಂತೆ ಆಡುತ್ತಿರುತ್ತಾರೆ. ದಲಿತರದೂ ಅದೇ ಥರದ ಪರಿಸ್ಥಿತಿ ಎಂದು ನುಡಿದರು.

ಬಿಜೆಪಿ ಯಾರ ವಿರೋಧಿಯೂ ಅಲ್ಲ. ದೇಶ ಸುಭದ್ರವಾಗಿರಬೇಕು. ಜನರ ಸುರಕ್ಷತೆ ಮುಖ್ಯ ಎಂಬುದು ನಮ್ಮ ಉದ್ದೇಶ ಎಂದರು. ಬೇರೆಯವರು ಮೂಗು ತೂರಿಸುವುದನ್ನು ತಡೆಯಲು 370ನೇ ವಿಧಿಯನ್ನು ಜಮ್ಮು- ಕಾಶ್ಮೀರದಲ್ಲಿ ರದ್ದು ಪಡಿಸಲಾಗಿದೆ ಎಂದು ವಿವರಿಸಿದರು.

ಬಿಜೆಪಿಯಲ್ಲಿ ಮುಸಲ್ಮಾನರಿಗೆ ವಿಶ್ವಾಸ ಕಡಿಮೆ. ತಪ್ಪು ಅವರದಲ್ಲ. ಬಿಜೆಪಿಯದೂ ತಪ್ಪಲ್ಲ. ನಮಗೆ ವಿಷ ಹಾಕುವವರು ಯಾರು? ಯಾಕೆ ಎಂಬುದು ಅರಿವಾದರೆ ನಮ್ಮಲ್ಲಿ ಜಗಳ ಬರುವುದಿಲ್ಲ ಎಂದರಲ್ಲದೆ, ಅದು ಅರಿವಾಗದೆ ಇದ್ದರೆ ಜಗಳ ಅನಿವಾರ್ಯ ಎಂದು ತಿಳಿಸಿದರು.

ಬಿಜೆಪಿ ಎಂದರೆ ಅಲ್ಪಸಂಖ್ಯಾತರ ವಿರೋಧಿ; ಬಿಜೆಪಿ ಬಂದರೆ, ನಿಮ್ಮನ್ನು ಪಾಕಿಸ್ತಾನಕ್ಕೆ ಕಳಿಸುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮ್ಮನ್ನು ಅಪಘಾನಿಸ್ತಾನಕ್ಕೆ ಕಳಿಸ್ತಾರೆ ಎನ್ನುತ್ತಾರೆ. ಇವೆಲ್ಲ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಇದು 11ನೇ ವರ್ಷ. ನಿಮ್ಮನ್ನು ಯಾಕೆ ಬಿಜೆಪಿ ಪಾಕಿಸ್ತಾನಕ್ಕೆ ಕಳುಹಿಸಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಯಾರನ್ನು ಯಾರೂ ಕಳಿಸಲು ಅಸಾಧ್ಯ. ನಿಮ್ಮನ್ನು ಅರಬಿ ಸಮುದ್ರದಲ್ಲಿ ಹಾಕಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಎಲ್ಲಿ ವಿದ್ಯೆ ಕಡಿಮೆ ಇದೆಯೋ ಅಲ್ಲಿ ಅರಿವು ಕೂಡ ಕಡಿಮೆ ಇರುತ್ತದೆ. ಅವರು ಹಾಕಿದ ವಿಷಜಂತುಗಳು ನಮ್ಮ ತಲೆಯಲ್ಲಿ ಕೆಲಸ ಮಾಡುತ್ತಿವೆ. ಈ ದೇಶದಲ್ಲಿ ಡಾ. ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಜಾತ್ಯತೀತವಾಗಿ, ಧರ್ಮಾತೀತವಾಗಿ ಅವಕಾಶಗಳನ್ನು ಕೊಟ್ಟಿದ್ದಾರೆ. ಸರ್ವರನ್ನು  ಒಳಗೊಂಡು ಭಾರತ ನಿರ್ಮಾಣ ಮಾಡುವ ಚಿಂತನೆ ಅವರದು ಎಂದು ತಿಳಿಸಿದರು.

ನಿನ್ನೆ ಕರ್ನಾಟಕದ ಸದಸ್ಯತ್ವ ಅಭಿಯಾನವನ್ನು ರಾಜ್ಯಾಧ್ಯಕ್ಷ ವಿಜಯೇಂದ್ರರ ನೇತೃತ್ವದಲ್ಲಿ ಉದ್ಘಾಟಿಸಿದ್ದೇವೆ. ಇದಕ್ಕೂ ಮೊದಲು ನರೇಂದ್ರ ಮೋದಿಜೀ, ನಡ್ಡಾಜೀ, ಅಮಿತ್ ಶಾ ಜೀ ಅವರು ದೆಹಲಿಯಲ್ಲಿ ಉದ್ಘಾಟನೆ ಮಾಡಿದ್ದಾರೆ. ಈಗಾಗಲೇ ಒಂದೇ ದಿನದಲ್ಲಿ ಒಂದು ಕೋಟಿಗೂ ಹೆಚ್ಚು ಸದಸ್ಯತ್ವ ಆಗಿದೆ ಎಂದರು. ರಾಜ್ಯದಲ್ಲೂ 5 ಲಕ್ಷ ಜನರು ಈಗಾಗಲೇ ಸದಸ್ಯತ್ವ ಪಡೆದಿದ್ದಾರೆ ಎಂದು ವಿವರಿಸಿದರು.

ಕಳೆದ ಸಾರಿ ರಾಜ್ಯದಲ್ಲಿ 1.05 ಕೋಟಿ ಸದಸ್ಯತ್ವ ಆಗಿತ್ತು. ಈ ಬಾರಿ ಕಡಿಮೆ ಎಂದರೂ 1.50 ಕೋಟಿ ಸದಸ್ಯತ್ವದ ಗುರಿ ಇದೆ ಎಂದು ತಿಳಿಸಿದರು. ಹಿಂದೆ ಅನೇಕ ರಾಜ್ಯಗಳಲ್ಲಿ, ಜಿಲ್ಲೆ, ಕ್ಷೇತ್ರಗಳಲ್ಲಿ ನಮ್ಮ ಪಕ್ಷವು ಬಲಯುತವಾಗಿ ಇರಲಿಲ್ಲ. ನಮ್ಮ ಪಕ್ಷ ಈಗ ಸುಭದ್ರವಾಗಿದೆ. 1.50 ಕೋಟಿ ಸದಸ್ಯರನ್ನು ಸೇರಿಸುವುದು ಕಷ್ಟ ಆಗಲಾರದು ಎಂದು ವಿಶ್ಲೇಷಿಸಿದರು.

ಪ್ರತಿ ಬೂತ್‍ನಲ್ಲಿ 300ರಿಂದ 400 ಸದಸ್ಯರನ್ನು ನೋಂದಣಿ ಮಾಡೋಣ. 55 ಸಾವಿರ ಬೂತ್‍ಗಳಿದ್ದು, 2 ಕೋಟಿ ಸದಸ್ಯರಾಗಲಿದ್ದಾರೆ. ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರಲ್ಲ; ಕೇವಲ ಕ್ರಿಶ್ಚಿಯನ್ನರು, ಜೈನರು, ಬೌದ್ಧರಲ್ಲ. ಎಲ್ಲರನ್ನೂ ಸೇರಿಸಿ ಅಲ್ಪಸಂಖ್ಯಾತರು ಎನ್ನುತ್ತಾರೆ ಎಂದು ವಿಶ್ಲೇಷಿಸಿದರು.

ರಾಜ್ಯ ಸಂಚಾಲಕ ಅಲ್ಲಾ ಬಕ್ಷ್ ತಿಮ್ಮಾಪುರ್ ಅವರು ಮಾತನಾಡಿ, ಈಗ ದೇಶದಲ್ಲಿ 18 ಕೋಟಿ ಸದಸ್ಯರಿದ್ದಾರೆ. 1980 ರಲ್ಲಿ ಬಿಜೆಪಿ ಜನ್ಮ ತಾಳಿತು. ಅದಕ್ಕಿಂತ ಹಿಂದೆ ಜನಸಂಘ ಇತ್ತು. ಸುಖಕ್ಕಾಗಿ ಪಕ್ಷ ಮಾಡಿರಲಿಲ್ಲ. ಭಾರತಾಂಬೆಯ ವೈಭವಕ್ಕಾಗಿ ಪಕ್ಷ ಸೇವೆ ಮಾಡಿದ್ದರು ಎಂದು ವಿವರಿಸಿದರು.

ಸದಸ್ಯತ್ವ ನೋಂದಣಿ ಒಂದು ಪ್ರಜಾಸತ್ತಾತ್ಮಕ ಕ್ರಮ. ನಮ್ಮದು ಜೀವಂತ ಪಕ್ಷ. ಬೇರೆ ಪಕ್ಷದಲ್ಲಿ ಸದಸ್ಯತ್ವ ನೋಂದಣಿಯ ಕ್ರಮ ಇಲ್ಲ ಎಂದು ತಿಳಿಸಿದರು. ನಮ್ಮ ಮೋರ್ಚಾಕ್ಕೆ 5 ಲಕ್ಷದ ಗುರಿ ಕೊಡಲಾಗಿದೆ ಎಂದರು.

ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅಬ್ದುಲ್ ಅಜೀಂ ಅವರು ಮಾತನಾಡಿ, ಬಿಜೆಪಿ ಬಗ್ಗೆ ಇತರ ಪಕ್ಷಗಳ ಮುಖಂಡರಲ್ಲಿ ಸಿಟ್ಟು, ದ್ವೇಷ ಭಾವನೆ ಇದೆ ಎಂದು ವಿವರಿಸಿದರು. ಭಾರತ್ ಮಾತಾಕೀ ಜೈ ಎಂದು ಹೇಳಿದ್ದನ್ನು ಆಕ್ಷೇಪಿಸಿದ್ದರು. ನಾನು ಆಗ ದೇಶವೆಂದರೆ ತಾಯಿ ಸಮಾನ ಎಂದು ಉತ್ತರ ಕೊಟ್ಟಿದ್ದೆ ಎಂದು ವಿವರಿಸಿದರು. ಕಾಂಗ್ರೆಸ್ ಪಕ್ಷದವರಿಗೆ ಇದೆಲ್ಲ ಅರ್ಥ ಆಗುವುದಿಲ್ಲ ಎಂದು ಹೇಳಿದ್ದಾಗಿ ತಿಳಿಸಿದರು.

ಬಿಜೆಪಿ ನನ್ನನ್ನು ಗೌರವದಿಂದ ನಡೆಸಿಕೊಂಡಿದೆ ಎಂದು ತಿಳಿಸಿದರು. 50 ಲಕ್ಷ ಅಲ್ಪಸಂಖ್ಯಾತರನ್ನು ನಾವು ಸದಸ್ಯರನ್ನಾಗಿ ಮಾಡೋಣ ಎಂದು ಮನವಿ ಮಾಡಿದರು. ದೊಡ್ಡ ಹುದ್ದೆಗಾಗಿ ಛಲವಾದಿ ನಾರಾಯಣಸ್ವಾಮಿ ಅವರನ್ನು ಅಭಿನಂದಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾ ವಾಹನ ಬಸ್ ಡಿಕ್ಕಿ: ಇಬ್ಬರು ಮಕ್ಕಳು ಸಾವು, ಮೂವರು ಮಕ್ಕಳ ಕಾಲು ತುಂಡು, 15 ವಿದ್ಯಾರ್ಥಿಗಳಿಗೆ ಗಾಯ