Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನಲ್ಲಿ ಎಷ್ಟು ಬಾಗಿಲಿದೆ, ಎಷ್ಟು ಕಿತ್ತೋಗಿದೆ ಎಂದು ಸದ್ಯದಲ್ಲೇ ಗೊತ್ತಾಗುತ್ತದೆ

BY Vijayendra

Krishnaveni K

ಬೆಂಗಳೂರು , ಬುಧವಾರ, 4 ಸೆಪ್ಟಂಬರ್ 2024 (14:56 IST)
ಬೆಂಗಳೂರು: ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ನಿನ್ನೆ ಛಲವಾದಿ ನಾರಾಯಣಸ್ವಾಮಿಯವರ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡಲು ಹೋಗಿದ್ದರು. ಎಲ್ಲಿದ್ದರು ನಿಮ್ಮ ಮಹಾನ್ ನಾಯಕರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಪ್ರಿಯಾಂಕ್ ಖರ್ಗೆಯವರನ್ನು ಪ್ರಶ್ನಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿ, ಪ್ರಶ್ನೆಗೆ ಉತ್ತರಿಸಿದರು. ಯಾಕೆ ಡಿ.ಕೆ.ಶಿವಕುಮಾರ್ ಇರಲಿಲ್ಲ? ಯಾಕೆ ಮುಖ್ಯಮಂತ್ರಿಗಳು ಬರಲಿಲ್ಲ? ಯಾಕೆ ನಿಮ್ಮ ಸರಕಾರದ ಇತರ ಹಿರಿಯ ಸಚಿವರು ನಿಮ್ಮದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಪರವಾಗಿ ಕಾಂಗ್ರೆಸ್ ಪಕ್ಷದ ಯಾವುದೇ ಹಿರಿಯ ನಾಯಕರು ರಾಜಭವನದಲ್ಲಿ ಕಾಣಲಿಲ್ಲ. ಈ ವಿಷಯಕ್ಕೆ ಪ್ರಿಯಾಂಕ್ ಖರ್ಗೆಯವರು ಉತ್ತರಿಸಲಿ ಎಂದು ಆಗ್ರಹಿಸಿದರು.

ನಮ್ಮ ಪಕ್ಷದ ಮುಖಂಡ ಛಲವಾದಿ ನಾರಾಯಣಸ್ವಾಮಿಯವರು ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ಹಗರಣಗಳಲ್ಲಿ ಮುಳುಗಿದ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರಕಾರವು ತನ್ನನ್ನು ತಾನು ಕಾಪಾಡಲು ಮತ್ತು ಭ್ರಷ್ಟಾಚಾರದಿಂದ ನುಣುಚಿಕೊಳ್ಳಲು ಬಿಜೆಪಿ ಮೇಲೆ ಕೆಸರು ಎರಚುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ಬಿಜೆಪಿ ಮುಖಂಡರ ವಿರುದ್ಧ ಕೇಸುಗಳನ್ನು ದಾಖಲಿಸುವ ಪ್ರಯತ್ನದಲ್ಲಿದ್ದಾರೆ. ಇದ್ಯಾವುದಕ್ಕೂ ನಾವು ಅಂಜುವುದಿಲ್ಲ ಎಂದು ತಿಳಿಸಿದರು.
 

ಉಪ್ಪು ತಿಂದವರು ನೀರು ಕುಡಿಯಲೇ ಬೇಕಾಗುತ್ತದೆ. ವಾಲ್ಮೀಕಿ ನಿಗಮದ ಹಗರಣ ಆದಾಗ ಮತ್ತು ಅಧಿಕಾರಿ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಾಗ ಮುಖ್ಯಮಂತ್ರಿಗಳು ಸರಕಾರದಲ್ಲಿ ಯಾವುದೇ ಹಗರಣ ಆಗಿಲ್ಲ ಎಂದಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಾಲ್ಮೀಕಿ ನಿಗಮದಲ್ಲಿ 87 ಕೋಟಿ ಹಗರಣ ಆದುದನ್ನು ಸದನದಲ್ಲಿ ಒಪ್ಪಿಕೊಂಡಿದ್ದರು. ಮುಡಾದಲ್ಲಿ ಹಗರಣ ಆಗಿಲ್ಲ; ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ತದನಂತರ ಆರೋಪಿಸಿದ್ದರು. ಈಗ ಪ್ರಕರಣ ಕೋರ್ಟಿನಲ್ಲಿದ್ದು, ಮುಡಾದ ಹಿಂದಿನ ಕಮೀಷನರ್ ಅನ್ನು ಅಮಾನತು ಮಾಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಅಧಿಕಾರಿ ಅಮಾನತಿನ ಮೂಲಕ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಸರಕಾರವು ಮೊದಲ ಬಾರಿಗೆ ಮುಡಾ ಹಗರಣ ನಡೆದುದನ್ನು ಒಪ್ಪಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಡಾ ಹಗರಣ ಸಂಬಂಧ ರಾಜೀನಾಮೆ ಕೊಡಲೇಬೇಕಾಗುತ್ತದೆ ಎಂದು ತಿಳಿಸಿದರು. ಕಾದು ನೋಡಿ ಎಂದರು.
 
ನಾನು ರಾಷ್ಟ್ರೀಯ ಅಧ್ಯಕ್ಷರು, ಅಮಿತ್ ಶಾ ಅವರನ್ನು ಭೇಟಿ ಮಾಡಿದಾಗ ರಾಜ್ಯದ ಚನ್ನಪಟ್ಟಣ ಮತ್ತಿತರ ಕ್ಷೇತ್ರಗಳ ಉಪ ಚುನಾವಣೆ ಸಂಬಂಧ ಚರ್ಚೆ ಮಾಡಿದ್ದೇನೆ. ಯೋಗೇಶ್ವರ್ ಅವರು ಚನ್ನಪಟ್ಟಣ ಅಭ್ಯರ್ಥಿ ಆಗುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಸಂಡೂರು, ಶಿಗ್ಗಾವಿಯಲ್ಲಿ ಅನೇಕ ಆಕಾಂಕ್ಷಿಗಳಿದ್ದಾರೆ. ನಾವು ರಾಜ್ಯಮಟ್ಟದಲ್ಲಿ ಚರ್ಚೆ ಮಾಡಿ, ಅಭ್ಯರ್ಥಿಗಳ ಹೆಸರನ್ನು ದೆಹಲಿಗೆ ಕಳಿಸಿಕೊಡುತ್ತೇವೆ ಎಂದು ಹೇಳಿದರು.

ಹೈಕೋರ್ಟ್ ತೀರ್ಪು ಬರಲಿ; ಯಾರ ಮನೆಯಲ್ಲಿ ಎಷ್ಟು ಬಾಗಿಲುಗಳಿವೆ; ಎಷ್ಟು ಬಾಗಿಲು ಕಿತ್ತುಕೊಂಡು ಹೋಗಿದ್ದಾರೆ. ಹೈಕೋರ್ಟ್ ತೀರ್ಪು ಬಂದಾಗ ಇವೆಲ್ಲ ಗೊತ್ತಾಗಲಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಕೆಪಿಎಸ್ಸಿ ಮರು ಪರೀಕ್ಷೆ ಸಂಬಂಧ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಇಂಥ ಬೇಜವಾಬ್ದಾರಿ ಅಧಿಕಾರಿಯನ್ನು ಯಾಕೆ ಅಲ್ಲಿ ಇಟ್ಟುಕೊಂಡಿದ್ದಾರೆ ಎಂದು ಕೇಳಿದರು. ಪರೀಕ್ಷೆ ಮುಂದೂಡಿಕೆ ಒಂದು ಭಾಗ; ಅಂಥ ಅಧಿಕಾರಿಗೆ ಶಿಕ್ಷೆ ಆಗಬೇಕಲ್ಲವೇ ಎಂದು ಪ್ರಶ್ನಿಸಿದರು. ಬೇಜವಾಬ್ದಾರಿ ಅಧಿಕಾರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹಿಸಿದರು. ಯುಪಿಎಸ್ಸಿ ಪರೀಕ್ಷೆ ದಿನದಂದೇ ಪಿಎಸ್‍ಐ ಪರೀಕ್ಷೆ ನಿರ್ಧರಿಸಿದ್ದು ಖಂಡಿತ ಸರಿಯಲ್ಲ ಎಂದು ತಿಳಿಸಿದರು. ದಿನಾಂಕ ಮರುಪರಿಶೀಲಿಸಲು ಒತ್ತಾಯಿಸಿದರು.

ಕಳೆದ ಬಾರಿ 1.04 ಕೋಟಿ ಸದಸ್ಯರ ನೋಂದಣಿ ಆಗಿತ್ತು. ಅದನ್ನು ಮೀರಿ ಸದಸ್ಯತ್ವ ನೋಂದಣಿ ಮಾಡುವ ಸಂಕಲ್ಪ ನಮ್ಮದು ಎಂದು ತಿಳಿಸಿದರು. ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದ ಆಚರಣೆಯ ಈ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನದ ಜೊತೆಜೊತೆಗೇ ಮೋದಿಜೀ ಅವರ 2047ನೇ ಇಸವಿಗೆ ಭಾರತವನ್ನು ವಿಕಸಿತ ರಾಷ್ಟ್ರವಾಗಿ, ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆ ಮಾಡುವ ಸಂಕಲ್ಪಕ್ಕೆ ದೊಡ್ಡ ಶಕ್ತಿ ತುಂಬಲು ಸಮಾಜದ ವಿವಿಧ ಸ್ತರದ ಎಲ್ಲರನ್ನೂ ಕೂಡ, ಬೇರೆ ಬೇರೆ ಕ್ಷೇತ್ರದವರನ್ನು ಗುರುತಿಸಿ ಎಲ್ಲರನ್ನೂ ಸದಸ್ಯತ್ವದ ಅಭಿಯಾನದಲ್ಲಿ ನೋಂದಣಿ ಮಾಡುವ ಗುರಿ ಇದೆ ಎಂದರು.

ಇವತ್ತು ರಾಜ್ಯದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಮಾನ್ಯ ಪ್ರಧಾನಿ ನರೇಂದ್ರ ಮೋದಿಜೀ ಅವರು ದೆಹಲಿಯಲ್ಲಿ ಈ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ ಎಂದು ವಿವರಿಸಿದರು. ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರದಲ್ಲಿ ಅಭಿಯಾನ ನಡೆಯುತ್ತಿದೆ. ಪ್ರತಿಯೊಂದು ಬೂತ್‍ನಲ್ಲಿ ಕೂಡ ಕನಿಷ್ಠ 300 ರಿಂದ 400 ಸಂಖ್ಯೆಯಲ್ಲಿ ಸದಸ್ಯರನ್ನು ಮಾಡುವ ಗುರಿ ಇದೆ ಎಂದು ತಿಳಿಸಿದರು.
 
 

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿಯ ಭೇಟಿ ಮಾಡಿ ಟಿಕೆಟ್ ಫಿಕ್ಸ್ ಮಾಡಿಕೊಂಡ ಬಜರಂಗ್ ಪೂನಿಯಾ, ವಿನೇಶ್ ಫೋಗಟ್