Publish Date: Wed, 16 Oct 2024 (09:28 IST)
Updated Date: Wed, 16 Oct 2024 (09:31 IST)
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತೆಯ ಸೀರೆ, ಒಳ ಉಡುಪಿನಿಂದ ಪ್ರಜ್ವಲ್ ಮೇಲಿನ ಆರೋಪ ಕನ್ ಫರ್ಮ್ ಆಗಿದೆ ಎನ್ನಲಾಗಿದೆ.
ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಮೇಲೆ ಹಾಸನ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣವೂ ಇದೆ. ಈ ಪ್ರಕರಣದಲ್ಲಿ ಪ್ರಜ್ವಲ್ ಭಾಗಿಯಾಗಿದ್ದು ಡಿಎನ್ ಎ ಪರೀಕ್ಷೆಯಿಂದ ಹೆಚ್ಚು ಕಡಿಮೆ ಪಕ್ಕಾ ಆಗಿದೆ ಎನ್ನಲಾಗಿದೆ.
ಮನೆ ಕೆಲಸದವರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆಯ ಮನೆಯಲ್ಲಿ ಪತ್ತೆಯಾದ ಸೀರೆಗಳು, ಒಳ ಉಡುಪುಗಳಲ್ಲಿ ಸಿಕ್ಕಿದ ವೀರ್ಯಾಣು ಸ್ಯಾಂಪಲ್ ಗೂ ಪ್ರಜ್ವಲ್ ವೀರ್ಯಾಣು ಸ್ಯಾಂಪಲ್ ಗೂ ಮ್ಯಾಚ್ ಆಗುತ್ತಿದೆ ಎಂದು ವರದಿಯಾಗಿದೆ. ಪ್ರಜ್ವಲ್ ಕೃತ್ಯ ನಡೆಸಿದ್ದರು ಎನ್ನಲಾದ ಹಾಸನದ ತೋಟದ ಮನೆ, ಸಂಸದರ ಅತಿಥಿ ಗೃಹ, ಬಸವನಗುಡಿಯ ಮನೆ ಸೇರಿದಂತೆ ಘಟನಾ ಸ್ಥಳದಿಂದ ಸೀರೆ, ಪೆಟ್ಟಿಕೋಟ್ ಸೇರಿದಂತೆ ಒಳ ಉಡುಪುಗಳನ್ನು ತನಿಖಾ ತಂಡ ಜಪ್ತಿ ಮಾಡಿ ಡಿಎನ್ ಎ ಪರೀಕ್ಷೆಗೊಳಪಡಿಸಿತ್ತು.
ಇದೀಗ ಡಿಎನ್ ಎ ಪರೀಕ್ಷೆ ವರದಿ ಬಂದ ಹಿನ್ನಲೆಯಲ್ಲಿ ಪ್ರಜ್ವಲ್ ವಿರುದ್ಧ ಮತ್ತೊಮ್ಮೆ ತನಿಖಾ ತಂಡ ಹೆಚ್ಚುವರಿ ಚಾರ್ಜ್ ಶೀಟ್ ಕೋರ್ಟ್ ಗೆ ಸಲ್ಲಿಕೆ ಮಾಡಲಿದೆ. ಇದೀಗ ಸಂತ್ರಸ್ತೆಯ ಸೀರೆಗಳಿಂದಲೇ ಪ್ರಜ್ವಲ್ ಗೆ ಮತ್ತಷ್ಟು ಕಂಟಕ ಎದುರಾಗುವ ಸಾಧ್ಯತೆ ಕಂಡುಬರುತ್ತಿದೆ.