ಬೆಂಗಳೂರು: ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲು ದೇವೇಗೌಡ ಕುಟುಂಬಕ್ಕೆ ಮರ್ಮಾಘಾತ ನೀಡಿದಂತಾಗಿದೆ. ರಾಮನಗರ ಭಾಗದಲ್ಲಿ ಜೆಡಿಎಸ್ ಹಿಡಿತ ಕೈ ತಪ್ಪಲು ಪ್ರಜ್ವಲ್ ರೇವಣ್ಣ ಪ್ರಕರಣವೂ ಕಾರಣವಾಯ್ತಾ ಎಂಬ ಅನುಮಾನ ಶುರುವಾಗಿದೆ.
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಾಗ ಇಡೀ ದೇವೇಗೌಡರ ಕುಟುಂಬವೇ ಮುಜುಗರಕ್ಕೀಡಾಯಿತು. ಈ ಪ್ರಕರಣದಲ್ಲಿ ಇನ್ನೂ ಪ್ರಜ್ವಲ್ ಜೈಲಿನಲ್ಲೇ ಇದ್ದಾರೆ. ಅವರ ಲೈಂಗಿಕ ಹಗರಣ ಬಯಲಿಗೆ ಬಂದ ಬಳಿಕ ಕುಮಾರಸ್ವಾಮಿ ಅಂತರ ಕಾಯ್ದುಕೊಳ್ಳಲು ಯತ್ನಿಸಿದರು.
ಆದರೆ ಎಷ್ಟೇ ಅಂತರ ಕಾಯ್ದುಕೊಂಡರೂ ಅವರೂ ದೇವೇಗೌಡರ ಕುಟುಂಬದವರೇ ಎನ್ನುವುದನ್ನು ಜನ ಮರೆತಿಲ್ಲ. ಜೊತೆಗೆ ಚನ್ನಪಟ್ಟಣದಲ್ಲಿ ಮತ್ತೆ ತಮ್ಮದೇ ಕುಟುಂಬದ ಮತ್ತೊಬ್ಬ ಕುಡಿಗೆ ಟಿಕೆಟ್ ಕೊಡಿಸಲಾಯಿತು. ಇಲ್ಲಿ ಯೋಗೇಶ್ವರ್ ಗೆಲ್ಲಬಹುದು ಎಂಬುದು ಬಿಜೆಪಿಗೂ ಗೊತ್ತಿತ್ತು. ಆದರೂ ಮೈತ್ರಿ ಧರ್ಮ ಪಾಲನೆಗಾಗಿ ನಿಖಿಲ್ ಗೆ ಟಿಕೆಟ್ ಕೊಡಲು ಒಪ್ಪಿಗೆ ನೀಡಲಾಯಿತು.
ನಿಖಿಲ್ ಈಗಾಗಲೇ ಎರಡು ಚುನಾವಣೆ ಸೋತಿದ್ದಾರೆ. ನಾಯಕರಾಗಿ ಅವರು ಇನ್ನೂ ಪಕ್ವವಾಗಿಲ್ಲ. ಜನರನ್ನು ಸೆಳೆಯಲು ಯಶಸ್ವಿಯಾಗಿಲ್ಲ. ಕೇವಲ ದೊಡ್ಡಗೌಡರ ಕುಟುಂಬದ ಹಿನ್ನಲೆಯಿದೆ ಎಂದು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಪ್ರಜ್ವಲ್ ರೇವಣ್ಣ ಕೇಸ್ ಬಳಿಕ ಕುಗ್ಗಿ ಹೋಗಿದ್ದ ದೇವೇಗೌಡರ ಕುಟುಂಬ ನಿಖಿಲ್ ಗೆಲುವಿನಲ್ಲಿ ಹೊಸ ಉತ್ಸಾಹ ಪಡೆಯುತ್ತಿತ್ತು. ಕುಮಾರಸ್ವಾಮಿ ಕೇಂದ್ರ ರಾಜಕಾರಣಕ್ಕೆ ಹೋಗಿದ್ದರಿಂದ ನಿಖಿಲ್ ಗೆ ರಾಜ್ಯದ ಪಟ್ಟ ಕಟ್ಟಬಹುದು ಎಂಬ ಲೆಕ್ಕಾಚಾರಗಳಿತ್ತು. ಅದೆಲ್ಲಾ ಈಗ ತಲೆಕೆಳಗಾಗಿದೆ.