ಬೆಂಗಳೂರು: ಮನೆಗೆಲಸದಾಕೆ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ನೀಡಿದೆ. ಅವರ ಶಿಕ್ಷೆ ಪ್ರಮಾಣ ಇಂದು ಪ್ರಕಟವಾಗಬೇಕಿದೆ.
ಮೈಸೂರಿನ ಕೆ.ಆರ್ ನಗರದ ಮಹಿಳೆ ಮೇಲೆ ಪ್ರಜ್ವಲ್ ರೇವಣ್ಣ ಫಾರ್ಮ್ ಹೌಸ್ ಮತ್ತು ಬಸವನಗುಡಿಯ ಮನೆಯಲ್ಲಿ ಒಂದುಕ್ಕಿಂತ ಹೆಚ್ಚು ಬಾರಿ ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರವೆಸಗಿದ್ದಲ್ಲದೆ ವಿಡಿಯೋ ಕೂಡಾ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಬಸವನಗುಡಿಯ ಪ್ರಜ್ವಲ್ ನಿವಾಸದಲ್ಲಿ ಸಿಕ್ಕ ಮಹಿಳೆಯ ಬಟ್ಟೆಯಲ್ಲಿ ವೀರ್ಯಾಣು ಪತ್ತೆಯಾಗಿತ್ತು. ಎಫ್ಎಸ್ಎಲ್ ವರದಿಯಲ್ಲಿ ಪ್ರಜ್ವಲ್ ನದ್ದೇ ವೀರ್ಯಾಣು ಎಂಬುದು ಖಚಿತವಾಗಿತ್ತು.
ಇದಲ್ಲದೆ ಅನೇಕ ಸಾಕ್ಷ್ಯಗಳು ಪ್ರಜ್ವಲ್ ವಿರುದ್ಧವಾಗಿದ್ದವು. ಹೀಗಾಗಿ ನಿನ್ನೆ ನ್ಯಾ. ಸಂತೋಷ್ ಗಜನಾನನ ಭಟ್ ಪ್ರಜ್ವಲ್ ದೋಷಿ ಎಂದು ತೀರ್ಪು ಪ್ರಕಟಿಸಿದ್ದರು. ಆದರೆ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಹೇಳಿದ್ದರು. ಹೀಗಾಗಿ ಇಂದೂ ಪ್ರಜ್ವಲ್ ಮತ್ತೊಮ್ಮೆ ನ್ಯಾಯಾಧೀಶರ ಮುಂದೆ ಹಾಜರಾಗಬೇಕಿದೆ.
ನಿನ್ನೆಯೂ ಕೋರ್ಟ್ ಗೆ ಪ್ರಜ್ವಲ್ ನನ್ನುಹಾಜರುಪಡಿಸಲಾಗಿತ್ತು. ತೀರ್ಪು ಪ್ರಕಟವಾಗುತ್ತಿದ್ದಂತ ಕಣ್ಣೀರು ಹಾಕುತ್ತಾ ಅಲ್ಲಿಂದ ತೆರಳಿದ್ದರು. ಇದೀಗ ಇಂದು ಮತ್ತೊಮ್ಮೆ ಶಿಕ್ಷೆಯ ಪ್ರಮಾಣ ಪ್ರಕಟಿಸಲು ಪ್ರಜ್ವಲ್ ನನ್ನು ಹಾಜರುಪಡಿಸಲಾಗುತ್ತದೆ. ಇನ್ನು ಶಿಕ್ಷೆ ಪ್ರಮಾಣ ಪ್ರಕಟಿಸುವಾಗ ಪ್ರಜ್ವಲ್ ಗೂ ನ್ಯಾಯಾಧೀಶರು ಮಾತನಾಡಲು ಅವಕಾಶ ಕೊಡುತ್ತಾರೆ. ಆಗ ಪ್ರಜ್ವಲ್ ಇನ್ನು ಮುಂದೆ ಈ ರೀತಿ ಮಾಡಲ್ಲ, ವಿನಾಯ್ತಿ ಕೊಡಿ ಎಂದು ಕೇಳಬಹುದು. ಪ್ರಜ್ವಲ್ ಪರ ವಕೀಲರು ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಮನವಿ ಮಾಡಬಹುದು. ಒಂದು ವೇಳೆ ಪ್ರಜ್ವಲ್ ಗೆ ಜೀವಾವಧಿ ಶಿಕ್ಷೆ ಘೋಷಿಸಿದರೆ 14 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಳಿಕ ಸನ್ನಡತೆ ತೋರಿದರೆ ಸರ್ಕಾರ ಬಿಡುಗಡೆಗೆ ಅಸ್ತು ಎನ್ನಬಹುದು. ಜೀವಿತಾವಧಿ ಶಿಕ್ಷೆ ಎಂದರೆ ಜೀವನ ಪರ್ಯಂತ ಜೈಲಿನಲ್ಲೇ ಕಳೆಯಬೇಕಾಗುತ್ತದೆ. ಹೀಗಾಗಿ ನಾಳೆ ಪ್ರಜ್ವಲ್ ಪಾಲಿಗೆ ಮಹತ್ವದ ದಿನವಾಗಿರಲಿದೆ.