ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಆಂಡ್ ಗ್ಯಾಂಗ್ ಗೆ ಇಂದು ಮಹತ್ವದ ದಿನವಾಗಿದೆ. ಇಂದು ಅಥವಾ ನಾಳೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗುವ ಸಾಧ್ಯತೆಯಿದೆ.
ನಟ ದರ್ಶನ್ ಆಂಡ್ ಗ್ಯಾಂಗ್ ಈ ಮೊದಲು ಪರಪ್ಪನ ಅಗ್ರಹಾರ ಜೈಲಿನಲ್ಲಿತ್ತು. ಆದರೆ ಅಲ್ಲಿ ರಾಜಾತಿಥ್ಯದ ಆರೋಪ ಬಂದ ಹಿನ್ನಲೆಯಲ್ಲಿ ಎಲ್ಲಾ ಆರೋಪಿಗಳನ್ನು ಒಂದೊಂದು ಜೈಲಿನಲ್ಲಿರಿಸಲಾಗಿದೆ. ಸದ್ಯಕ್ಕೆ ದರ್ಶನ್ ಮಾತ್ರ ಬಳ್ಳಾರಿ ಕೇಂದ್ರ ಕಾರಾಗ್ರಹದಲ್ಲಿದ್ದಾರೆ.
ಈಗಾಗಲೇ ಪ್ರಕರಣ ನಡೆದು ಮೂರು ತಿಂಗಳಾಗುತ್ತಾ ಬಂದಿದೆ. ಜೂನ್ 9 ರಂದು ರೇಣುಕಾಸ್ವಾಮಿ ಹತ್ಯೆ ನಡೆದಿತ್ತು. ಅದಾಗಿ ನಾಲ್ಕೇ ದಿನಗಳಲ್ಲಿ ದರ್ಶನ್ ಆಂಡ್ ಗ್ಯಾಂಗ್ ಅರೆಸ್ಟ್ ಆಗಿದ್ದರು. ಇದೀಗ ಎಲ್ಲಾ ಆರೋಪಿಗಳು 70 ಕ್ಕೂ ಹೆಚ್ಚು ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.
90 ದಿನಗಳೊಳಗಾಗಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕಾಗುತ್ತದೆ. ಅದರಂತೆ ಪೊಲೀಸರು ಇಂದು ಅಥವಾ ನಾಳೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಸುಮಾರು 4500 ಪುಟಗಳಷ್ಟು ಚಾರ್ಜ್ ಶೀಟ್ ತಯಾರಿಸಲಾಗಿದೆ ಎಂಬ ಮಾಹಿತಿಯಿದೆ. ಪ್ರತ್ಯಕ್ಷ ದರ್ಶಿಗಳು, ಎಫ್ಎಸ್ಎಲ್, ಡಿಎನ್ ಎ ವರದಿ ಸೇರಿದಂತೆ ಎಲ್ಲಾ ರೀತಿಯ ತಾಂತ್ರಿಕ ಸಾಕ್ಷ್ಯಗಳನ್ನೂ ಕಲೆ ಹಾಕಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತಿದೆ. ಚಾರ್ಜ್ ಶೀಟ್ ನಲ್ಲಿ ದರ್ಶನ್ ಆಂಡ್ ಗ್ಯಾಂಗ್ ವಿರುದ್ಧ ಸುಲಭವಾಗಿ ಕೇಸ್ ನಿಂದ ತಪ್ಪಿಸಿಕೊಳ್ಳದಂತೆ ಎಲ್ಲಾ ರೀತಿಯಿಂದಲೂ ಲಾಕ್ ಮಾಡಿದ್ದಾರೆ ಎನ್ನಲಾಗಿದೆ.