ಬೆಂಗಳೂರು: ಆರ್.ಆರ್ ನಗರ ರಾಜಕಾಲುವೆ ಬಳಿ ದೊರೆತ ಶವದ ಗುರಿತನ್ನು ಇಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಭಾರತೀನಗರದ ಮುರುಗಪಿಳ್ಳೆ ಪಾಳ್ಯದ ನಿವಾಸಿ ತರುಣ್ (21) ಕೊಲೆಯಾದವ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್ ಮ್ಯಾನೆಜ್ಮೆಂಟ್ ವ್ಯಾಸಂಗ ಮಾಡಿದ್ದ ಯುವಕ ತರುಣ್ (21) ನವೆಂಬರ್ 1 ರಂದು ಬೆಳಗ್ಗೆ ತಾಯಿಯ ಬಳಿ ಹಣ ತೆಗೆದುಕೊಂಡು ಪಟಾಕಿ ತರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದನು. ರಾತ್ರಿಯಾದರೂ ಮನೆಗೆ ವಾಪಾಸ್ ಆಗದ ಕಾರಣ ಕುಟುಂಬಸ್ಥರು ನಗರದ ಭಾರತಿ ನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ ಯುವಕನ ಮೂಗಿಗೆ ಬಾಯಿಗೆ ಪ್ಲಾಸ್ಟರ್ ಸುತ್ತಿ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ನಂತರ ಗೋಣೀಚೀಲದಲ್ಲಿ ಸುತ್ತಿ ಆರ್.ಆರ್ ನಗರ ಠಾಣಾ ವ್ಯಾಪ್ತಿಯ ಡಿಸೋಜ ನಗರದ ರಾಜಕಾಲುವೆ ಬಳಿ ಶವವನ್ನು ಬಿಸಾಕಿ ಹೋಗಿದ್ದರು ಎಂದಿದ್ದಾರೆ.
ನಿನ್ನೆ (ಮಂಗಳವಾರ) ಚಿಂದಿ ಆಯುವ ವ್ಯಕ್ತಿ ರಾಜಕಾಲುವೆ ಪಕ್ಕ ಗೋಣೀಚೀಲದಲ್ಲಿ ಶವ ಇರುವ ಶಂಕೆಯಿಂದ ಸ್ಥಳೀಯರಿಗೆ ಮಾಹಿತಿ ನೀಡಿದ್ದನು. ಸಾರ್ವಜನಿಕರು ಬಂದು ನೋಡಿ ಪೊಲೀಸರಿಗೆ ಫೋನ್ ಮೂಲಕ ತಿಳಿಸಿದ್ದರು. ರಾಜರಾಜೇಶ್ವರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನೆಡಸಿ ಗೋಣಿಚೀಲ ತೆಗೆದು ನೋಡಿದಾಗ ಯುವಕನ ಶವ ಪತ್ತೆಯಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಈಗ ಯುವಕನ ಗುರುತು ಪತ್ತೆಯಾಗಿದ್ದು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಯಾರು ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎನ್ನುವುದು ಇನ್ನೂ ಪತ್ತೆಯಾಗಿಲ್ಲ. ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನೆಡೆಯುತ್ತಿದ್ದು, ಪ್ರಕ್ರಿಯೆಯ ನಂತರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.