ನವದೆಹಲಿ: ಬಡ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗಲು ಕೇಂದ್ರ ಸರ್ಕಾರ ಪಿಎಂ ವಿದ್ಯಾಲಕ್ಷ್ಮಿ ಯೋಜನೆ ಆರಂಭಿಸಲು ಒಪ್ಪಿಗೆ ಸೂಚಿಸಿದೆ. ಬಡ ವಿದ್ಯಾರ್ಥಿಗಳ ಓದಿಗೆ ಬಡ್ಡಿ ರಹಿತವಾಗಿ 10 ಲಕ್ಷ ರೂ.ವರೆಗೆ ಸಾಲ ಸಿಗಲಿದೆ.
ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಹಣಕಾಸಿನ ಸಮಸ್ಯೆ ಎದುರಾಗುತ್ತದೆ. ಇಂತಹ ವಿದ್ಯಾರ್ಥಿಗಳಿಗೆ ನೆರವಾಗಲು ಪಿಎಂ ವಿದ್ಯಾಲಕ್ಷ್ಮಿ ಯೋಜನೆ ಜಾರಿಗೆ ತರಲಾಗುತ್ತದೆ. ಇದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದಕ್ಕಾಗಿ 3600 ಕೋಟಿ ರೂ. ಮೀಸಲಿಡಲು ತೀರ್ಮಾನಿಸಲಾಗಿದೆ.
ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಯಾವ ಗ್ಯಾರಂಟಿ ಇಲ್ಲದೇ ಸಾಲ ಸಿಗಲಿದೆ. ಇದಕ್ಕಾಗಿ 2024 ರಿಂದ 2031 ರವರೆಗೆ 3600 ಕೋಟಿ ರೂ. ಮೀಸಲಿಡಲಾಗುತ್ತದೆ. ಪ್ರತೀ ವರ್ಷ 1 ಲಕ್ಷದಂತೆ ಸುಮಾರು 7 ಲಕ್ಷ ವಿದ್ಯಾರ್ಥಿಗಳಿಗೆ ನೆರವಾಗಲಿದೆ ಎಂದು ವಾರ್ತಾ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ.
ಅರ್ಹತೆಗಳೇನು?
ಈ ಯೋಜನೆಯ ಅನ್ವಯ ಸಾಲ ಪಡೆಯಲು ಕುಟುಂಬದ ಆದಾಯ 4.5 ಲಕ್ಷದೊಳಗೆ ಇದ್ದರೆ ಶೇ.100 ಬಡ್ಡಿ ರಹಿತ ಸಾಲ ಸಿಗುತ್ತದೆ. ಕುಟುಂಬದ ಆದಾಯ 8 ಲಕ್ಷದವರೆಗೆ ಇದ್ದರೆ 3% ಬಡ್ಡಿದರದಲ್ಲಿ ಸಾಲ ಸಿಗಲಿದೆ. ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದ ಚೌಕಟ್ಟಿನಲ್ಲಿ ರಾಂಕ್ ಪಡೆದಿರುವ 100 ಸರ್ಕಾರೀ ಮತ್ತು ಖಾಸಗೀ ಸಂಸ್ಥೆಗಳು, ಕೇಂದ್ರ ಸರ್ಕಾರ ನಡೆಸುವ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೇರುವ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಬಹುದು. ಅಲ್ಲದೇ ಪ್ರತೀ ವರ್ಷ ಈ ಯೋಜನೆಯನ್ನು ಅಪ್ ಡೇಟ್ ಮಾಡಲಾಗುವುದು.
ಈ ಯೋಜನೆಯಲ್ಲಿ ವಿದ್ಯಾರ್ಥಿಯ ಭೋಧನಾ ಶುಲ್ಕ, ಅವರು ಆಯ್ಕೆ ಮಾಡಿಕೊಂಡಿರುವ ಕೋರ್ಸ್ ಗಳಿಗೆ ವ್ಯಯಿಸುವ ಇತರೆ ಖರ್ಚನ್ನು ಭರಿಸಲಾಗುತ್ತದೆ.